ಮಕ್ಕಳ ಮೇಲೆ ಒತ್ತಡ‌ ಹಾಕಬೇಡಿ: ಪೋಷಕರಿಗೆ ಮೋದಿ ಸಲಹೆ

ನವದೆಹಲಿ: ಪೋಷಕರು ಮಕ್ಕಳಿಗೆ  ಹೆಚ್ಚು ಒತ್ತಡ ಹಾಕಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.

ಪೋಷಕರು ಒತ್ತಡ ಹಾಕದಿದ್ದರೂ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆಯಲ್ಲಿ ಮುನ್ನುಗ್ಗಿ, ಯಾವತ್ತು ಧೈರ್ಯ ಕಳೆದುಕೊಳ್ಳಬೇಡಿ. ಓದನ್ನು ಕಡೆಗಣಿಸಬೇಡಿ ಎಂದು ತಿಳಿ ಹೇಳಿದರು.

ಆರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜೊತೆಗೆ ಸಂವಾದ ನಡೆಸಿ ಇಂತಹ ಹಲವು ಸಲಹೆಗಳನ್ನು ನೀಡಿದರು.

ಒಂದೋ, ಎರಡೋ ಪರೀಕ್ಷೆಯಲ್ಲಿ ನಕಲು  ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಕಲು ಮಾಡುತ್ತಾ ಮುಂದೆ ಹೋದರೂ ಮುಂದೆ ಜೀವನದಲ್ಲಿ ಸಿಕ್ಕಿಹಾಕಿಕೊಳ್ಳುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಯಾರಾದರೂ ಮೋಸ ಮಾಡಿ ನಿಮಗಿಂತ ಹೆಚ್ಚು ಅಂಕ ಪಡೆದರೂ ಅದು ನಿಮಗೆ ಜೀವನದಲ್ಲಿ ಅಡ್ಡಿಯಾಗಲಾರದು ನಿಮ್ಮ ಆಂತರಿಕ ಶಕ್ತಿಯನ್ನು ನಂಬಿ ಎಂದು ತಿಳಿಸಿದರು.

ಪೋಷಕರು ತಮ್ಮ ಮಕ್ಕಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಒತ್ತಡಗಳಿಗೆ ಮಣಿಯಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಕ್ರಿಕೆಟ್‍ನಲ್ಲಿ ಜನರು ಕ್ರೀಡಾಂಗಣದಲ್ಲಿ ಬೌಂಡರಿ, ಸಿಕ್ಸರ್ ಬೇಕು ಅಂತ ಕೂಗುತ್ತಲೇ ಇರುತ್ತಾರೆ.

ಪ್ರೇಕ್ಷಕರ ಬೇಡಿಕೆಯ ಮೇರೆಗೆ ಆಟಗಾರನು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುತ್ತಾನಾ, ಆಟಗಾರನು ಚೆಂಡಿನ ಮೇಲೆ ಮಾತ್ರ ಕೇಂದ್ರೀಕರಿಸುತ್ತಾನೆ ಹಾಗೆಯೇ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಕೇಂದ್ರೀಕರಿಸಬೇಕು ಎಂದು ಹೇಳಿದರು

ಇಷ್ಟ ಮತ್ತು ಇಷ್ಟಪಡದಿರುವ ವಿಷಯಗಳಿಗೆ ಒಂದರ ನಂತರ ಒಂದರಂತೆ ಸಮಯ ನೀಡಿ. ತಾಯಿಯಿಂದ ಸಮಯ ನಿರ್ವಹಣೆ ಕಲಿಯಿರಿ, ತಾಯಿಯು ದಿನದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾಳೆ.

ತಾಯಿಗೆ ಗರಿಷ್ಠ ಕೆಲಸವಿದೆ, ಸಮಯ ನಿರ್ವಹಣೆಯಿಂದ ಕೆಲಸ ನಿರ್ವಹಿಸುತ್ತಾರೆ ಪ್ರತಿ ಕೆಲಸವನ್ನು ತಾಯಿ ಸಮಯಕ್ಕೆ ಸರಿಯಾಗಿ ಮಾಡುತ್ತಾಳೆ ಹಾಗಯೇ ವಿದ್ಯಾರ್ಥಿಗಳು ಸಮಯದ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಪರೀಕ್ಷೆಯಲ್ಲಿ ನಕಲು ತಪ್ಪಿಸುವ ಕುರಿತಾಗಿ ಮಾತನಾಡಿದ ಮೋದಿ ಟ್ಯೂಷನ್ ಕಲಿಸುವ ಕೆಲವು ಶಿಕ್ಷಕರಿದ್ದಾರೆ ಅವರು ತಮ್ಮ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬೇಕೆಂದು ಬಯಸುತ್ತಾರೆ. ಆದ್ದರಿಂದ ಅವರು ಮೋಸವನ್ನು ಪ್ರೋತ್ಸಾಹಿಸುತ್ತಾರೆ.

ವಿದ್ಯಾರ್ಥಿಗಳು ನಕಲು ಮಾಡಲು ಸೃಜನಶೀಲತಾಗಿರುತ್ತಾರೆ. ಆ ಸೃಜನಶೀಲತೆಯನ್ನು ಅಧ್ಯಯನಕ್ಕೆ ತೋರಿಸಿದರೆ, ನಕಲು ಮಾಡುವ ಅಗತ್ಯವೇ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಸ್ಮಾರ್ಟ್ ವರ್ಕ್ ಮತ್ತು ಹಾರ್ಡ್ ವರ್ಕ್ ನಡುವೆ ಯಾವುದನ್ನು ಆಯ್ಕೆ ಮಾಡಬೇಕು? ಎಂಬ ಪ್ರಶ್ನೆಗೆ, ಬಾಯಾರಿದ ಕಾಗೆಯ ಕಥೆಯನ್ನು ನೀವೆಲ್ಲರೂ ಕೇಳಿರಬೇಕು, ಅದರಲ್ಲಿ ಕಾಗೆಯು ಕಲ್ಲುಹಾಕಿ ನೀರು ಕುಡಿಯುತ್ತದೆ ಇದು ಕಾಗೆಯ ಹಾರ್ಡ್ ವರ್ಕಾ ಅಥವಾ ಸ್ಮಾರ್ಟ್ ವರ್ಕಾ

ಕೆಲವರು ಹಾರ್ಡ್‍ಲಿ ಸ್ಮಾರ್ಟ್ ವರ್ಕ್ ಮಾಡಿದರೆ ಕೆಲವರು ಸ್ಮಾರ್ಟ್‍ಲಿ ಹಾರ್ಡ್ ವರ್ಕ್ ಮಾಡುತ್ತಾರೆ ಕಾಗೆಗಳಿಂದ ನಾವು ಕಲಿಯಬೇಕಾದುದು ಇದನ್ನೇ.

ವಿದ್ಯಾರ್ಥಿಯೊಬ್ಬ ವಿರೋಧ ಪಕ್ಷದವರ ಟೀಕೆ ಬಗ್ಗೆ ಪ್ರಶ್ನಿಸಿದಾಗ ಅದು ಔಟ್ ಆಫ್ ಸಿಲಬಸ್ ಪ್ರಶ್ನೆ ಇದ್ದಂತೆ ಎಂದು ಉತ್ತರಿಸಿದರು.

ಈ ಬಾರಿಯ ಪರೀಕ್ಷಾ ಪೇ ಚರ್ಚೆಯಲ್ಲಿ 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕರು ಮತ್ತು 1.95 ಲಕ್ಷ ಪೋಷಕರು ಸೇರಿದಂತೆ ಒಟ್ಟು 38.80 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.