ಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿ, ಧಾರವಾಡದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಕಿತ್ತೂರು ಕರ್ನಾಟಕ ಭಾಗದಲ್ಲಿ ಸಂಚಲನ ಉಂಟುಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗ್ಗೆ ತಮ್ಮ 63ನೇ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯಲ್ಲಿರುವ ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ. ಸಮಗ್ರ ಕರ್ನಾಟಕ ದೃಷ್ಟಿಯಲ್ಲಿಟ್ಟುಕೊಂಡು ಅಮಿತ್ ಶಾ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಕಳೆದ ತಿಂಗಳು ಮಂಡ್ಯಕ್ಕೆ ಬಂದಿದ್ದ ಶಾ ಅವರು ಈಗ ಉತ್ತರ ಕರ್ನಾಟಕ ಭಾಗಕ್ಕೆ, ಮುಂದಿನ ತಿಂಗಳು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಬರಲಿದ್ದಾರೆ ಎಂದರು.
ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ನಾವು ಅದನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರೀಯ ನಾಯಕರ ಪ್ರಭಾವವನ್ನು ಕರ್ನಾಟಕ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬೆಳಗಾವಿ ಬಿಜೆಪಿ ನಾಯಕರಲ್ಲಿ ಭಿನ್ನಮತವಿಲ್ಲ, ನಮ್ಮ ದೃಷ್ಟಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.
ಪಕ್ಷದ ಬೆಳವಣಿಗೆ ಮುಖ್ಯ, ಎಲ್ಲರೂ ಶ್ರಮಿಸಬೇಕಾಗಿದೆ. ಕರ್ನಾಟಕದ ಪ್ರತಿಯೊಂದು ಭಾಗಗಳಲ್ಲಿಯೂ ಬಿಜೆಪಿಗೆ ಒಂದು ಗುರಿಯಿದ್ದು ಅದನ್ನು ಸಾಧಿಸಲು ಸಂಘಟಿತರಾಗು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಿಂಹಸ್ವಪ್ನವಾಗಿದೆ, ಕನಸಲ್ಲೂ ಅವರಿಗೆ ಬಿಜೆಪಿ ಬರುತ್ತದೆ, ಹೀಗಾಗಿ ಬಿಜೆಪಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು.

