ಗಾಂಧೀಜಿ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡೋಣ -ಬೊಮ್ಮಾಯಿ

ಬೆಂಗಳೂರು: ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ಈ ದಿನದ ಬಗ್ಗೆ ನಾವು ಚಿಂತನೆ ಮಾಡಿ ಆತ್ಮಾವಲೋಕನ ಮಾಡಿಕೊಂಡು ಅವರ ಮಾರ್ಗದಲ್ಲಿ ನಡೆಯುವ  ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ವಿಧಾನಸೌಧ  ಮತ್ತು ವಿಕಾಸಸೌಧದ ನಡುವೆ ಇರುವ ಮಹಾತ್ಮಾ ಗಾಂಧಿಜೀಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಸಿಎಂ ಮಾತನಾಡಿದರು.

ಮಹಾತ್ಮ ಗಾಂಧಿ ಅವರು ಹೇಳಿರುವಂತೆ ಅವರ ಜೀವನವೇ ಒಂದು ಸಂದೇಶ. ಅವರ ಜೀವನವನ್ನು ಓದಿ, ತಿಳಿದುಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ಅವರ ಜೀವನದ ಆಧಾರ ನೈತಿಕತೆ ಮತ್ತು ಸತ್ಯ. ಇವೆರಡನ್ನೂ ಅತ್ಯಂತ ಶುದ್ಧವಾಗಿ ಪ್ರತಿಪಾದಿಸಿದ್ದರು.

ಸದಾಕಾಲ ತಮ್ಮನ್ನು ತಾವೇ ಪರೀಕ್ಷೆಗೆ ಒಳಪಡಿಸಿಕೊಂಡು ಪರಿಶುದ್ಧವಾಗುತ್ತಿದ್ದರು.  ಅಹಿಂಸೆಯಲ್ಲಿ ಬಹಳ ದೊಡ್ಡ ಶಕ್ತಿ ಇದೆ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಎಂದು ತಿಳಿಸಿದರು

ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಅನಾಮಧೇಯರು ತಮ್ಮ ಆಸ್ತಿ-ಪಾಸ್ತಿಗಳನ್ನು ತ್ಯಾಗ ಮಾಡಿದ್ದರು. ಗಟ್ಟಿ ನಿಲುವು ತೆಗೆದುಕೊಂಡು ಹೋರಾಟಕ್ಕೆ ಹೊಸ ದಿಕ್ಸೂಚಿ ನೀಡಿದ ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಲೋಕ ಮಾನ್ಯ ತಿಲಕ್ ಮುಂತಾದವರೂ ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು.

ಇವೆಲ್ಲವನ್ನೂ ಕ್ರೋಢಿಕರಿಸಿ  ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿ ಸತ್ಯಾಗ್ರಹ ನಡೆಸಿ ಆಂದೋಲನ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪರಿವರ್ತನೆ ಮಾಡಿ ಗಾಂಧೀಜಿ ಬ್ರಿಟೀಷರ ಜೊತೆ ಕಠಿಣ ಮಾತುಕತೆ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದರು.

ಗಾಂಧೀಜಿ ಅವರ ತತ್ವ ಆದರ್ಶಗಳ ಮೇಲೆ ಈ ದೇಶದ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಬರುವುದು ಅಗತ್ಯವಿದೆ ಎಂದರು.

ದೇಶಕ್ಕೆ ಬಹಳ ದೊಡ್ಡ ಚರಿತ್ರೆ ಇದೆ. ಬೇಕಾಗಿರುವುದು ಚಾರಿತ್ರ್ಯ. ಅವರಿಗೆ ಭಾವಪೂರ್ವಕವಾಗಿ, ಹೃದಯದಂತರಾಳ ದಿಂದ ನಮನಗಳನ್ನು ಸಲ್ಲಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.