ಕಾಶ್ಮೀರದ ಹಿಮ ಸೌಂದರ್ಯಕ್ಕೆ ಮರುಳಾದ ಡಿಕೆಶಿ

ಶ್ರೀನಗರ:‌ ಕಾಶ್ಮೀರದ ಹಿಮ ಸೌಂದರ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಕ್ಷರಶಃ ಮಾರು ಹೋಗಿದ್ದಾರೆ.

ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಹಾಗೂ ದೇಶದ ಜ್ವಲಂತ ಸಮಸ್ಯೆಗಳ ಕುರಿತು ಜನಪರ ಧ್ವನಿ ಎತ್ತಲು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ  ಐತಿಹಾಸಿಕ ಭಾರತ ಜೋಡೋ ಯಾತ್ರೆ ಸೋಮವಾರ ಕಾಶ್ಮೀರ ತಲುಪಿದೆ

ವಿಭಿನ್ನ ಹವಾಮಾನಗಳ ವೈಪರಿತ್ಯ ಸವಾಲು, ರಾಜಕೀಯ ಎದುರಾಳಿಗಳ ಟೀಕೆ, ಷಡ್ಯಂತ್ರ, ಅಪಪ್ರಚಾರ ಸೇರಿದಂತೆ ಎಲ್ಲ ಅಡೆತಡೆಗಳನ್ನು ಮೀರಿ ಯಾತ್ರೆ ಗುರಿ ತಲುಪಿದೆ.

ಇಂದು ಕಾಶ್ಮೀರದಲ್ಲಿ ಭಾರತ ಜೋಡೋ ಯಾತ್ರೆ ಸಮಾರೋಪ ಸಮಾರಂಭ ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಕಣಿವೆ ರಾಜ್ಯಕ್ಕೆ ತೆರಳಿದ್ದಾರೆ.

ಈ ವೇಳೆ ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತಿರುವ ಡಿ.ಕೆ. ಶಿ ಅವರು ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಭಾರತ ಜೋಡೋ ಯಾತ್ರೆ ಅಂತಿಮ ದಿನ ನಾವೆಲ್ಲ ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿದ್ದೇವೆ.

ದೇಶವನ್ನು ಒಗ್ಗೂಡಿಸಿ, ದೇಶದ ಐಕ್ಯತೆಗೆ ರಾಹುಲ್ ಗಾಂಧಿ ಅವರು ಈ ಯಾತ್ರೆ ಆರಂಭಿಸಿದ್ದು, ಇಂದು ಯಾತ್ರೆಯ ಅಂತಿಮ ದಿನವಾಗಿದೆ.

ಈ ಸಮಾರೋಪ ಕಾರ್ಯಕ್ರಮಕ್ಕೆ ಸುಮಾರು 100 ಸಂಸದರು, ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರು, ಪ್ರಮುಖ ನಾಯಕರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿದ್ದೇವೆ.

ರಾತ್ರಿ ಇಲ್ಲಿನ ಹವಾಮಾನ 9° ಸೆಲ್ಸಿಯಸ್ ಇತ್ತು. ಬೆಳಗಿನ ಜಾವ 2 ಗಂಟೆ ನಂತರ ಹಿಮ ಸುರಿಯಲು ಆರಂಭವಾಗಿದ್ದು, ಇಡೀ ಪ್ರದೇಶ ಹಿಮದಿಂದ ತುಂಬಿದೆ.

ಬೆಳಗ್ಗೆ ಕೊಠಡಿಯ ಹೊರಗೆ ಬಂದು ನೋಡಿದಾಗ ನನ್ನ ಜೀವನದಲ್ಲಿ ಎಂದೂ ನೋಡಿರದ ಹಿಮಪಾತ ಹಾಗೂ ಅದರ ಸೌಂದರ್ಯ ಮನಸೂರೆಗೊಂಡಿದೆ ಎಂದು ಬಣ್ಣಿಸಿದ್ದಾರೆ.

ಧಾರಾಕಾರ ಮಳೆಯಂತೆ ಹಿಮ ಸುರಿಯುತ್ತಿದೆ. ಹಿಂದೆಂದೂ ನಾನು ಈ ರೀತಿಯ ಅದ್ಭುತ ದೃಶ್ಯ ಕಂಡಿರಲಿಲ್ಲ.

ನಾನು ಈ ಹಿಂದೆ ಸ್ವಿಜರ್ಲೆಂಡ್ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದೇನೆ. ಆದರೆ ಇಂದು ನನಗೆ ಆಗಿರುವ ಪ್ರಕೃತಿ ಸೌಂದರ್ಯದ ಅನುಭವ ಹಿಂದೆಂದೂ ಆಗಿರಲಿಲ್ಲ. ಇದನ್ನು ಎಂದು ಮರೆಯಲು ಸಾಧ್ಯವಿಲ್ಲ.

ಈ ಕಾಶ್ಮೀರ ನಮ್ಮ ದೇಶದ ಆಸ್ತಿ. ನಾವು ಇದನ್ನು ಕಾಪಾಡಿಕೊಳ್ಳಬೇಕು. ಈ ಹವಾಮಾನ ಪರಿಸ್ಥಿತಿಯಲ್ಲಿ ನಮ್ಮ ಯೋಧರು ಗಡಿ ಕಾಯುತ್ತಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಶಿವಕುಮಾರ್  ಹೇಳಿದ್ದಾರೆ.