ಬೆಳಗಾವಿ: ಇದೇ ನನ್ನ ಕೊನೆಯ ಚುನಾವಣೆ, ಇಂಥ ಥರ್ಡ್ ಕ್ಲಾಸ್ ರಾಜಕೀಯ ನನಗೆ ಬೇಡ; ಹೀಗೆ ಹೇಳಿದವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ.
ಮಿಸ್ಟರ್ ಶಿವಕುಮಾರ್ ರಾಜಕಾರಣದಲ್ಲಿರಲು ನಾಲಾಯಕ್, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.
ಸಿಬಿಐ ಸಂಪೂರ್ಣವಾಗಿ ವಿಚಾರಣೆ ನಡೆಸಬೇಕು ಎಂದಿದ್ದಾರೆ. ಒಬ್ಬ ವ್ಯಕ್ತಿಯ ರಾಜಕೀಯ ಜೀವನವನ್ನು ಹಾಳು ಮಾಡಲು ಸಿಡಿ ಬಳಕೆ ಮಾಡಿದ ಆತ ರಾಜಕಾರಣದಲ್ಲಿ ಇರಲು ನಾಲಾಯಕ್ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ,ಡಿಕೆಶಿಯನ್ನ ಪೂರ್ಣಪ್ರಮಾಣದಲ್ಲಿ ಮನೆಗೆ ಕಳುಹಿಸುವವರೆಗೂ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲ್ಲ ಎಂದು ಗರಂ ಆಗಿ ನುಡಿದರು.
1985 ರಲ್ಲಿ ನಾನು ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಒಟ್ಟಿಗೆ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಿದ್ದೆವು, ಇಬ್ಬರೂ ಸೋತೆವು, ಆಗ ಆತ ಹರಿದ ಚಪ್ಪಲಿ, ಎಚ್ ಎಂಟಿ ವಾಚ್ ಹಾಕಿದ್ದ, ಈಗ ಕೋಟ್ಯಂತರ ರುಪಾಯಿ ಸಂಪಾದನೆ ಮಾಡಿ ರಾಜ್ಯವನ್ನೇ ಲೂಟಿ ಮಾಡಿದ್ದಾನೆ ಎಂದು ದೂರಿದರು.
ನನ್ನ ಬಳಿ 20 ವಿಡಿಯೋ, ಆಡಿಯೋ ಸಾಕ್ಷಿ ಇದ್ದು ಅವು ಗಳನ್ನು ಸಿಬಿಐಗೆ ನೀಡಬೇಕಾಗಿದೆ.
ಒಂದರಲ್ಲಿ ಡಿಕೆಶಿ ಮಹಿಳೆಯೊಬ್ಬರೊಂದಿಗೆ ಮಾತನಾಡಿ ನನ್ನ ಬಳಿ ದುಬೈ ಹಾಗೂ ಲಂಡನ್ ನಲ್ಲಿ ಒಂದೊಂದು ಮನೆ ಇದೆ ಸಾವಿರಾರು ಕೋಟಿ ಹಣ ಇದೆ ಎಂದು ಹೇಳಿಕೊಂಡಿದ್ದಾರೆ.
ಸಿಡಿ ಹಾಗೂ ಆಡಿಯೋ ಈಗ ಬಿಡುಗಡೆ ಮಾಡಿದರೆ ನ್ಯಾಯಾಲಯದಲ್ಲಿ ಅದನ್ನು ಅವರು ಪ್ರಶ್ನಿಸುತ್ತಾರೆ. ಹಾಗಾಗಿ ಅವುಗಳನ್ನು ಸಿಬಿಐಗೆ ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಯಾವ ಮಹಿಳೆಯೊಂದಿಗೆ ಡಿಕೆಶಿ ಮಾತನಾಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಅವರ ಗರ್ಲ್ ಫ್ರೆಂಡ್ ಇರಬಹುದು ಎಂದು ಜಾರಕಿಹೊಳಿ ಉತ್ತರಿಸಿದರು.
ಕಾಂಗ್ರೆಸ್ ಪಕ್ಷ ಸರ್ವನಾಶ ಆಗಲು ಡಿಕೆಶಿ ಹಾಗೂ ವಿಷಕನ್ಯೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳದೆ ಅವರು ವಾಗ್ದಾಳಿ ನಡೆಸಿದರು.

