ಮೈಸೂರು: ಡಾ.ವಿಷ್ಣುವರ್ಧನ್ ಇಡೀ ಕರುನಾಡು ಮೆಚ್ಚಿದ ಹೃದಯವಂತ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕೊಂಡಾಡಿದರು.
ತಮ್ಮಅಭಿನಯದಿಂದಲೇ ಜನಮನ ಗೆದ್ದ ಅಪ್ರತಿಮ ನಟ ವಿಷ್ಣು ಎಂದು ಸಿಎಂ ತಿಳಿಸಿದರು.
ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ಡಾ. ವಿಷ್ಣುವರ್ಧನ್ ಪ್ರತಿಷ್ಠಾನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಿರುವ ಡಾ ವಿಷ್ಣುವರ್ಧನ್ ಸ್ಮಾರಕ ಭವನ ಉದ್ಘಾಟಿಸಿ ಬೊಮ್ಮಾಯಿ ಮಾತನಾಡಿದರು.
ನಾಗರಹಾವು ಸಿನೆಮಾದ ರಾಮಾಚಾರಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾಗಿದ್ದ ಡಾ. ವಿಷ್ಣುವರ್ಧನ್ ಯಾವುದೇ ಪಾತ್ರಕ್ಕೂ ಸೈ ಎನ್ನವಂತೆ ಭಾವ ತುಂಬಿ ನಟಿಸುತ್ತಿದ್ದರು.
ಅವರು ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಿದರು.
ಡಾ. ವಿಷ್ಣುವರ್ಧನ್ ಅವರಿಗೆ ಜೀವನದಲ್ಲಿ ಜೊತೆಯಾಗಿ,ಶಕ್ತಿಯಾಗಿ ನಿಂತಿದ್ದ ಪದ್ಮಶ್ರೀ ಭಾರತಿ ಅವರು ವಿಷ್ಣುವರ್ಧನ್ ಅವರು ಜನಿಸಿದ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡಬೇಂದು ಹಂಬಲಿಸಿ ಪರಿಶ್ರಮ ವಹಿಸಿ ಸ್ಮಾರಕ ನಿರ್ಮಾಣ ಮಾಡಿಸಿದ್ದಾರೆ.
ಈ ಭವ್ಯ ಸ್ಮಾರಕದಲ್ಲಿ ಎಲ್ಲಾ ಸೌಲಭ್ಯ ಇದೆ ಸಾರ್ವಜನಿಕರು ಹಾಗೂ ಚಿತ್ರ ರಂಗ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿದರು.
ವಿಷ್ಣುವರ್ಧನ್ ಅವರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರೋ ಸಾಧನೆ ನಮ್ಮ ಕಣ್ಣ ಮುಂದೆ ಇದೆ.
ನಾನು ಕೂಡಾ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.
70 ರ ದಶಕದಲ್ಲಿ ನಾಗರಹಾವು ಚಿತ್ರದ ಹೊಸ ನಾಯಕ,ವಿಷ್ಣುವರ್ಧನ್ ಬಂದರು
ಮೊದಲ ಸಲ ನೋಡಿದವರು ಖಂಡಿತವಾಗಿ ವಿಷ್ಣುವರ್ಧನ್ ಅಭಿಮಾನಿ ಆಗುತ್ತಿದ್ದರು.
ಇಂದಿಗೂ ಕೂಡ ವಿಷ್ಣುವರ್ಧನ್ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ವಿಷ್ಣುವರ್ಧನ್ ಭಾವುಕ ಜೀವಿ, ಮಾನವೀಯತೆಯಿಂದ ಮೆರೆದವರು.
ಅವರ ಪಾತ್ರದಲ್ಲಿಯೂ ಮಾನವೀಯತೆ ಎದ್ದು ಕಾಣುತ್ತಿತ್ತು. ಸ್ಮಾರಕ ನಿರ್ಮಾಣಕ್ಕೆ
ಯಡಿಯೂರಪ್ಪ ನವರು 11 ಕೋಟಿ ಬಿಡುಗಡೆ ಮಾಡಿಸಿದ್ದರು. ಇದಕ್ಕಾಗಿ ನಾನು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಹೇಳಿದರು.
ಡಾ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅಭಿಮಾನಿಗಳ ಒತ್ತಾಯವಾಗಿದೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಅವರ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಅನಿರುದ್ ಜತಕರ್ ಅವರು ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ .ಪಿ ಹರ್ಷ ಅವರು ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಹಿನ್ನಲೆ ,ಸ್ವರೂಪ ಹಾಗೂ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ,ಶಾಸಕರಾದ ರಾಮದಾಸ್,
ನಾಗೇಂದ್ರ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ವಿವಿಧ ಜನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

