ಮೈಸೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ಶಿವರಾತ್ರಿ ವಿಶೇಷ ಪೂಜೆ ನಡೆಯುತ್ತಿದೆ.
ಮುಂಜಾನೆ 5 ಗಂಟೆಯಿಂದಲೇ ಅಭಿಷೇಕ,ಶಿವಪೂಜೆ ಆರಂಭವಾಯಿತು.
ತ್ರಿನೇಶ್ವರನಿಗೆ ಲಗುಸ್ಯಾನ ಪೂರ್ವಕ, ರುದ್ರಭಿಷೇಕ, ಪಂಚಾಮೃತಾಭಿಷೇಕ ನೆರವೇರಿಸಲಾಯಿತು.
ಅಭಿಷೇಕದ ನಂತರ ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ ಮಾಡಲಾಯಿತು.
ಚಿನ್ನದ ಕೊಳಗ ಧರಿಸಿದ ಶಿವನನ್ನ ನೋಡಲು ಭಕ್ತಸಾಗರವೇ ಹರಿದು ಬರುತ್ತಿದೆ.
ಇನ್ನು ಮುಂಜಾನೆ 6 ಗಂಟೆಯಿಂದಲೇ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ.
ಜಾವಗಳ ಪೂಜೆ ನಡೆಯಲಿದ್ದು, ಬೆಳಗಿನ ಜಾವ 4 ಗಂಟೆಯವರೆಗು ಪೂಜೆ ನೆರವೇರಲಿದೆ.
ಪ್ರಕಾರೋತ್ಸವದ ಮೂಲಕ ಶಿವರಾತ್ರಿ ಪೂಜೆ ಸಮಾಪ್ತಿಯಾಗಲಿದೆ.ಅರಮನೆ ಆವರಣದ ತೃನೇಶ್ವರ ದೇವಾಲಯದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುತ್ರ ಆದ್ಯವೀರ್ ಜೊತೆ ವಿಶೇಷ ಪೂಜೆ ಸಲ್ಲಿಸಿದರು.
ಸಾಂಪ್ರದಾಯಕ ಉಡುಗೆ ತೊಟ್ಟು ಪರಮೇಶ್ವರನ ದರ್ಶನ ಪಡೆದರು.
ಚಿನ್ನದ ಕೊಳಗದ ವಿಶೇಷ
ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು 1954ರಲ್ಲಿ ಗಂಡು ಮಗು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಸಂದರ್ಭದಲ್ಲಿ 11ಕೆಜಿ ತೂಕದ ಶುದ್ಧ ಚಿನ್ನದ ಮುಖವಾಡದ ಕೊಳಗ ಮಾಡಿಸಿ ಕೊಟ್ಟಿದ್ದರು.
ವರ್ಷದಲ್ಲಿ ಮಹರ್ಷಿವರಾತ್ರಿಯ ದಿನ ಮಾತ್ರ ಈ ಚಿನ್ನದ ಕೊಳಗವನ್ನು ಶಿವನಿಗೆ ಧರಿಸಿ ಪೂಜೆ ಸಲ್ಲಿಸುವುದು ವಾಡಿಕೆ.
ಈ ಚಿನ್ನದ ಕೊಳದಲ್ಲಿ ಒಂದು ಚಿನ್ನದ ಜಟಾ ಮುಕುಟ, ಒಂದು ಚಿನ್ನದ ತಾಟಂಕ, ಒಂದು ಚಿನ್ನದ ಕರ್ಣಕುಂಡಲ, 2 ಕೆಂಪು ಹರಳಿನ ಓಲೆ, ಎರಡು ಲೋಲಂಕ, ಹಣೆಯ ಮೇಲೆ ಕೆಂಪು ಕಲ್ಲಿನ ತಿಲಕ, ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆ, ಏಳು ಕೆಂಪು ಕಲ್ಲುಗಳು, ಬೆಳ್ಳಿಯ ಅರ್ಧಚಂದ್ರ ಮತ್ತು ಬೆಳ್ಳಿಯ ತಿರುಪು ಇದೆ.
ಈ ಬಾರಿ ಎರಡು ದಿನ ಚಿನ್ನದ ಕೊಳಗದ ದರ್ಶನ ಭಕ್ತಾದಿಗಳಿಗೆ ಸಿಗಲಿದೆ ಏಕೆಂದರೆ ಭಾನುವಾರ ರಜಾ ದಿನವಾಗಿರುವುದರಿಂದ ನಾಳೆಯೂ ಭಕ್ತರಿಗೆ ದರ್ಶನ ಭಾಗ್ಯ ಇದೆ ಎಂದು ಮುಜರಾಯಿ ಇಲಾಖೆಯ ತಹಸೀಲ್ದಾರ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಕಾಮೇಶ್ವರ ಕಾಮೇಶ್ವರಿ ದೇವಾಸ್ಥನದಲ್ಲಿ ವಿಶೇಷ ಪೂಜೆ
ಶಿವರಾತ್ರಿ ಹಿನ್ನೆಲೆ ನಗರದ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಿದ್ದು, ಕಾಮೇಶ್ವರ ಕಾಮೇಶ್ವರಿ ದೇವಾಸ್ಥನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾ ಶಿವರಾತ್ರಿ ಅಂಗವಾಗಿ 101 ಲಿಂಗಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಶಿವನಿಗೆ ಬಿಲ್ವಪತ್ರೆಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ಶಿವನಿಗೆ ಪ್ರಾತಃ ಕಾಲದಿಂದಲೇ ವಿಶೇಷ ಪೂಜೆಯ ಜೊತೆ, ಹಾಲು, ಎಳನೀರು ಕುಂಕುಮಾದಿಗಳ ಅಭಿಷೇಕ ಮಾಡಲಾಗುತ್ತಿದೆ.
ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದು ಭಕ್ತರು ಪುನೀತರಾದರು. ಕೊರೊನಾ ಆತಂಕ ಕಡಿಮೆಯಾದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತಸಾಗರವೇ ಹರಿದುಬಂದಿದೆ.
ದಕ್ಷಿಣ ಕಾಶಿ ನಂಜುಂಡನ ಸನ್ನಧಿಯಲ್ಲಿ ಕಳೆಗಟ್ಟಿದ ಮಹಾಶಿವರಾತ್ರಿ
ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾಗಿರುವ ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲೂ ಮಹಾಶಿವರಾತ್ರಿ ಕಳೆಗಟ್ಟಿದೆ.
ಮುಂಜಾನೆಯಿಂದ ಅಭಿಷೇಕ ಆರಂಭವಾಗಿದೆ. ಹುಷಿಕಾಲ ಪೂಜೆ, ಕ್ಷೀರಾಭೀಷೇಕ, ಫಲಪಂಚಾಮೃತಾಭಿಷೇಕ, ಮಹನ್ಯಾಸಪೂರ್ವಕ ರುದ್ರಾಭಿಷೇಕ
ಬಳಿಕ ಒಂಭತ್ತು ಘಂಟೆಗೆ ಪ್ರಾತಃಕಾಲ ಪೂಜೆ ನೆರವೇರಿಸಲಾಯಿತು. ಶಿವರಾತ್ರಿ ಜಾಗರಣೆಗಾಗಿ ಸಕಲ ಸಿದ್ದತೆ ಮಾಡಲಾಗಿದ್ದು, ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ.

