ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪ ಅವರ ಕಿತ್ತಾಟದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಸರ್ಕಾರ ಕಡೆಗೂ ಕ್ರಮ ಜರುಗಿಸಿದೆ.
ಈ ಇಬ್ಬರು ಅಧಿಕಾರಿಗಳ ಜಟಾಪಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಹಾದಿರಂಪ,ಬೀದಿರಂಪವಾಯಿತು.
ಇದೀಗ ಇಬ್ಬರು ಅಧಿಕಾರಿಗಳಿಗೂ ವರ್ಗಾವಣೆ ಮಾಡಿ ಯಾವುದೇ ಹುದ್ದೆ ನೀಡದೆ ಸರ್ಕಾರ ಶಿಕ್ಷೆ ನೀಡಿದೆ.
ಇವರ ಜಗಳಕ್ಕೆ ಪರೋಕ್ಷವಾಗಿ ಕಾರಣರಾದ ರೂಪ ಪತಿ ಐಎಎಸ್ ಅಧಿಕಾರಿ ಮುನಿಶ್ ಮೌದ್ಗಿಲ್ ಅವರಿಗೆ ಕೂಡ ಸರ್ಕಾರ ಬಿಸಿ ಮುಟ್ಟಿಸಿದೆ.
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗಿದೆ. ಜೊತೆಗೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸ್ಥಾನದಿಂದ ರೂಪ ಅವರಿಗೂ ಕೊಕ್ ನೀಡಲಾಗಿದೆ.
ಆದರೆ ಇಬ್ಬರನ್ನು ವರ್ಗಾವಣೆ ಮಾಡಿದ್ದರೂ ಸ್ಥಳ ನಿಯುಕ್ತಿ ಮಾಡದೆ, ಅಂದರೆ ಯಾವುದೇ ಹುದ್ದೆ ನೀಡದೆ ಹಾಗೆಯೇ ಕೂರಿಸಲಾಗಿದೆ.
ರೂಪ ಪತಿ ಮುನಿಶ್ ಮೌದ್ಗಿಲ್ ಅವರನ್ನು ಸರ್ವೆ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತ ಸ್ಥಾನದಿಂದ ಅಷ್ಟೆನೂ ಪ್ರಭಾವವಿಲ್ಲದ ಡಿಪಿಎಆರ್ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಈ ಮೂಲಕ ಸರ್ಕಾರ ಇಬ್ಬರು ಅಧಿಕಾರಿಗಳು ಹಾಗೂ ಇವರ ಕಿತ್ತಾಟಕ್ಕೆ ಪರೋಕ್ಷ ಕಾರಣರಾದ ರೂಪ ಪತಿಗೂ ಬಿಸಿ ಮುಟ್ಟಿಸಿದೆ.
ಸರ್ಕಾರ ಕ್ರಮ ತೆಗೆದುಕೊಂಡಿದೆ ಆದರೆ ಈ ಮೂವರು ಅಧಿಕಾರಿಗಳು ಮೌನವಾಗಿರುತ್ತಾರೋ ಮತ್ತೆ ಜಗಳ ಮುಂದುವರಿಸುತ್ತಾರೋ ಕಾದು ನೋಡಬೇಕಿದೆ.
ರೋಹಿಣಿ ಸಿಂಧೂರಿ ಅವರ ಜಾಗಕ್ಕೆ ಐಎಎಸ್ ಅಧಿಕಾರಿ ಬಸವರಾಜೇಂದ್ರ. ಹೆಚ್ ಅವರನ್ನ ನೇಮಿಸಲಾಗಿದೆ.
ಡಿ.ರೂಪಾ ಮೌದ್ಗಿಲ್ ಅವರ ಜಾಗಕ್ಕೆ ಸರ್ಕಾರ ಐಎಎಸ್ ಅಧಿಕಾರಿ ಡಿ. ಭಾರತಿ ಅವರನ್ನ ನೇಮಕ ಮಾಡಿದೆ.

