ಸಿದ್ದರಾಮಯ್ಯ ಅಸಹನೆಯ ಹೇಳಿಕೆ-ಸಿ.ಟಿ.ರವಿ ಟೀಕಾಪ್ರಹಾರ

ಮೈಸೂರು: ಲಿಂಗಾಯತ ಸಿಎಂಗಳು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದಾಗಿ ಸಿದ್ಧರಾಮಯ್ಯ ಅಸಹನೆಯಿಂದ ಹೇಳಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಿದ್ಧರಾಮಯ್ಯ ಅಸಹನೆಯಿಂದ ಈ ಮಾತು ಹೇಳಿದ್ದಾರೆ.ಇಡೀ ಲಿಂಗಾಯತ ಸಮುದಾಯವನ್ನು ಭ್ರಷ್ಟಾಚಾರಿಗಳು ಎಂದು ಹೇಳಿರುವುದು ಸರಿಯಲ್ಲ, ಇಡೀ ಕಾಂಗ್ರೆಸ್ ನೀತಿ ಸಮಾಜ ಒಡೆಯುವುದಾಗಿದೆ ಎಂದು ಕಿಡಿಕಾರಿದರು.

ಸಿದ್ಧರಾಮಯ್ಯರನ್ನ ಸೋಲಿಸಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದ ಸಿ.ಟಿ.ರವಿ, ಡಾ. ಜಿ.ಪರಮೇಶ್ವರ್ ಅವರನ್ನು ಸೋಲಿಸಿದ ಶಾಪ ಸಿದ್ಧರಾಮಯ್ಯಗೆ ತಟ್ಟಲಿದೆ ಎಂದು ಹೇಳಿದರು.

ಸಿದ್ಧರಾಮಯ್ಯನವರು ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ,ಅವರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಇತ್ತ ಡಿ. ಕೆ ಶಿವಕುಮಾರ್ ಖರ್ಗೆಯವರನ್ನು ಸಿಎಂ ಮಾಡುವ ವಿಚಾರ ಮುಂದಿಟ್ಟಿದ್ಧಾರೆ.ಹೀಗಾಗಿ ತನಗೆ ದಕ್ಕದ್ಧು ಬೇರೆಯವರಿಗೂ ಧಕ್ಕದಿರಲಿ ಎಂಬ ಕಾರಣಕ್ಕೆ ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದರು.

ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂದು ‌ಇದೇ ವೇಳೆ‌ ಸಿ.ಟಿ.ರವಿ ಇಂಗಿತ ವ್ಯಕ್ತಪಡಿಸಿದರು.

ಸಿ.ಟಿ.ರವಿ ಮುಂದಿನ ಸಿಎಂ ಎಂದು ನಿಮ್ಮ ಕಾರ್ಯಕರ್ತರು ಹೇಳುತ್ತಿದ್ದಾರಲ್ಲಾ‌ ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿದಾಗ ಸಿಎಂ ಮಾಡುವಂತೆ ಕೇಳುತ್ತೇನೆ ಎಂದು ತಿಳಿಸಿದರು.

ಹಳೆ ಬೇರು, ಹೊಸ ಚಿಗುರು ಮಾದರಿಯಲ್ಲಿ ಟಿಕೆಟ್​ ಹಂಚಿಕೆ ಮಾಡಲಾಗಿದೆ. ಬಡವರಿಂದ ಮೇಧಾವಿಗಳವರೆಗೂ ಪ್ರಾತಿನಿಧ್ಯ ನೀಡಲಾಗಿದೆ,ಸ್ಪಷ್ಟ ಬಹುಮತ ನೀಡಿ ಸರ್ಕಾರ ರಚನೆಗೆ ಅವಕಾಶ ಕೊಡುವಂತೆ ಸಿ.ಟಿ ರವಿ ಮನವಿ ಮಾಡಿದರು.