ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಲಾಟೆ; ಅಭಿವೃದ್ಧಿ ಕೆಲಸ ಆಗಲ್ಲ -ಪ್ರತಾಪ್ ಸಿಂಹ

ಮೈಸೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಜಾತಿಗಲಾಟೆ ರಾಜಕೀಯ ಬಿಟ್ಟರೆ ಬೇರೇನೂ ಅಭಿವೃದ್ಧಿ ಕೆಲಸಗಳು ನಡೆಯುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.    

ಮಂಗಳವಾರ  ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಮತದಾರರು ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕೆಂದು  ಮನವಿ ಮಾಡಿದರು.   

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಹಳ ಅಭಿವೃದ್ಧಿ ಕಾರ್ಯವನ್ನ ಮಾಡಿದೆ. ಮೈಸೂರಿನ  ಹೂಟಗಳ್ಳಿ ನಗರಸಭೆ ಮಾಡಲಾಗಿದೆ. ಶ್ರೀರಾಮಪುರ, ಕಡಕೊಳ ಪಟ್ಟಣ ಪಂಚಾಯಿತಿ, ನಾಲ್ಕು ಸ್ಥಳೀಯ ಸಂಸ್ಥೆಗಳು ಸೇರಿ ಗ್ರೇಟರ್ ಮೈಸೂರು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ‌ತಿಳಿಸಿದರು.

ಇನ್ನೂ 18- 20 ತಿಂಗಳಲ್ಲಿ ಜಿಲ್ಲೆಯ ಪ್ರತಿಯೊಂದು ಮನೆಗೂ ಜಲಜೀವನ್ ಯೋಜನೆ ಹಾಗೂ ಅಮೃತ್ ಯೋಜನೆ-2 ಅಡಿ ಕಾವೇರಿ ಮತ್ತು ಕಬಿನಿ ಜಲಾಶಯ, ನದಿಗಳಿಂದ ಶುದ್ದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಮೈಸೂರಿನ  ಚಾಮರಾಜ ಕ್ಷೇತ್ರದಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಕೆ. ಆರ್‌ ಆಸ್ಪತ್ರೆಯನ್ನು  ಅಭಿವೃದ್ಧಿಪಡಿಸಲಾಗುತ್ತಿದೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ 130  ಕೋಟಿ ರೂಪಾಯಿ ಮಂಜುರಾಗಿದೆ, ಕಾಮಗಾರಿ ಶೀಘ್ರ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಶಾಸಕ ಎನ್ ನಾಗೇಂದ್ರ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿಕೊಟ್ಟರೆ, ಅವರು ಸಚಿವರಾಗಿ ಬರುತ್ತಾರೆ ಎಂದು ತಿಳಿಸಿದರು.

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀ ವತ್ಸ ಅವರು, ಪಕ್ಷದ ಕ್ರಿಯಾಶೀಲ ಸಂಘಟಕರಾಗಿದ್ದಾರೆ,  ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ.ಅವರನ್ನು ಮತದಾರರು ಗೆಲ್ಲಿಸಿಕೊಟ್ಟರೆ ಕ್ಷೇತ್ರ ಇನ್ನೂ ಅಭಿವೃದ್ಧಿ ಆಗಲಿದೆ.

ಮೈಸೂರಿನ ಎನ್.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸಂದೇಶಸ್ವಾಮಿ  ಎರಡು ಬಾರಿ ಸ್ಪರ್ಧಿಸಿದ್ದು, ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಒಂದೇ ಕುಟುಂಬಕ್ಕೆ ಅಧಿಕಾರವನ್ನು ನೀಡುತ್ತಾ ಬರುತ್ತಿರುವುದರಿಂದ, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ, ಹಾಗಾಗಿ ಈ ಬಾರಿ ಸಂದೇಶ್‌ ಸ್ವಾಮಿಯವರನ್ನು‌ ಗೆಲ್ಲಿಸಬೇಕೆಂದು ಕೋರಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಈ ಬಾರಿ ಕವೀಶ್ ಗೌಡರನ್ನು ಕಣಕ್ಕೆ ಇಳಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೂ ಕೂಡ ಬಿಜೆಪಿ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಪ್ರತಾಪ್ ‌ಸಿಂಹ ತಿಳಿಸಿದರು.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಶಾಸಕ ಎಲ್. ನಾಗೇಂದ್ರ, ಬಿಜೆಪಿ ನಗರ ಕಾರ್ಯಾಧ್ಯಕ್ಷ ಹೆಚ್.ಜಿ.ಗಿರಿಧರ್, ಮೈಸೂರು  ಮೇಯರ್ ಶಿವಕುಮಾರ್, ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ಮೈಸೂರು ವಿಭಾಗ ಮಾಧ್ಯಮ ಕೇಂದ್ರದ ಸಂಯೋಜಕ ನಾಗೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ವಕ್ತಾರ ಕೇಬಲ್ ಮಹೇಶ್, ಸಹ ಸಂಚಾಲಕ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.     

ಬಿಜೆಪಿ ಗೆ ಹಲವಾರು ಮಂದಿ ಸೇರ್ಪಡೆ:

ಇದೇ ವೇಳೆ ರಾಜ್ಯ ಸರ್ಕಾರ ಎಸ್ಸಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿರು ವುದು, ಒಳ ಮೀಸಲಾತಿ ಜಾರಿಗೆ ತಂದಿರುವುದನ್ನು ಮೆಚ್ಚಿ ದಲಿತ ಮುಖಂಡರಾದ ಮಹದೇವ, ಸಿ.ಪಿ.ರಂಗಯ್ಯ, ರಾಜು, ಶ್ರೀನಿವಾಸ್, ವೆಂಕಟೇಶ, ರಾಜು ಮುಂತಾದವರು ಬಿಜೆಪಿ ಗೆ ಸೇರ್ಪಡೆಯಾದರು. ಅವರಿಗೆ ಪಕ್ಷದ ಶಲ್ಯ ಹಾಕಿ, ಭಾವುಟ ನೀಡಿ ಬರಮಾಡಿಕೊಳ್ಳಲಾಯಿತು.