ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸುರ್ಜೆವಾಲ ಟೀಕಾ ಪ್ರಹಾರ

ಮೈಸೂರು: ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಲಾಲಿಪಪ್ ರಿಸರ್ವೇಷನ್ ಕೊಟ್ಟಿದೆ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್  ಸುರ್ಜೆವಾಲ ಟೀಕಿಸಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿದೆ ಎಂದು ಹೇಳಿದರು.

ಕೂಡಲೇ ನರೇಂದ್ರ ಮೋದಿ ಸರ್ಕಾರ ಎಸ್ ಸಿ, ಎಸ್ ಟಿ, ಲಿಂಗಾಯತ ಹಾಗೂ ಒಕ್ಕಲಿಗರ  ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಹಾಗೂ‌ ರಾಜ್ಯ ಸರ್ಕರಗಳು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬಲ್ ದ್ರೋಹ ಮಾಡಿರುವ ಸರಕಾರ ಎಂದು ಕಿಡಿಕಾರಿದರು.

ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಮತ್ತು ಒಳ ಮೀಸಲಾತಿ ಎಸ್ಸಿ – ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಬಿಜೆಪಿ ಸರ್ಕಾರದ ಆದೇಶವನ್ನು ಬೊಮ್ಮಾಯಿ ಸರ್ಕಾರವು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಲು ವಿಫಲವಾದ ಕಾರಣ ನ್ಯಾಯಾಲಯ ತಡೆಹಿಡಿದಿದೆ ಎಂದು ತಿಳಿಸಿದರು.

ಬಿಜೆಪಿ-ಬೊಮ್ಮಾಯಿ ಸರ್ಕಾರದ ಮೀಸಲಾತಿಯ ವಂಚನೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೊಮ್ಮೆ ಬಯಲಾಗಿದೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯವನ್ನೆ ಟಾರ್ಗೆಟ್ ಮಾಡುತ್ತಿದೆ ಎಂದು ದೂರಿದರು.

ಇದೇ ವೇಳೆ‌ ಸುರ್ಜೆವಾಲ ಅವರು ಮೋದಿ ಹಾಗೂ ಬೊಮ್ಮಾಯಿ ಸರ್ಕಾರಕ್ಕೆ 9 ಪ್ರಶ್ನೆ ಕೇಳಿದ್ದಾರೆ.

ಲಿಂಗಾಯತರು, ಒಕ್ಕಲಿಗರು, ಎಸ್ಸಿ, ಎಸ್ಟಿಗಳ ಮೇಲೆ ನೀವು ಮೀಸಲಾತಿಯ ವಂಚನೆಯನ್ನು ಏಕೆ ಮಾಡಿದ್ದೀರಿ?

ನೀವು ಸುಪ್ರೀಂ ಕೋರ್ಟ್ನಲ್ಲಿ ಮೀಸಲಾತಿಯನ್ನು ಏಕೆ ಸಮರ್ಥಿಸಲಿಲ್ಲ?

ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಲು ಬೊಮ್ಮಾಯಿ-ಮೋದಿ ಸರ್ಕಾರ ಏಕೆ ವಿಫಲವಾಯಿತು,ಮಾರ್ಚ್ 14, 2023 ರಂದು ಸಂಸತ್ತಿನ ನೆಲದ ಮೇಲೆ SC-ST ಗಾಗಿ ಹೆಚ್ಚಿದ ಮೀಸಲಾತಿಯನ್ನು ಮೋದಿ ಸರ್ಕಾರ ಏಕೆ ತಿರಸ್ಕರಿಸಿತು.

SC-ST ಗಾಗಿ ಹೆಚ್ಚಿದ ಮೀಸಲಾತಿಯ ಕಾನೂನನ್ನು ಕೇಂದ್ರ ಸರ್ಕಾರವು ಸಂವಿಧಾನದ IX ನೇ ಶೆಡ್ಯೂಲ್ನಲ್ಲಿ ಏಕೆ ಹಾಕಲಿಲ್ಲ?

ಎಸ್ಸಿ, ಎಸ್ಟಿ, ಒಬಿಸಿ, ಲಿಂಗಾಯತರು, ಒಕ್ಕಲಿಗರು ಮತ್ತು ಇತರರ ಆಕಾಂಕ್ಷೆಗಳನ್ನು ಪೂರೈಸಲು ನೀವು ಮೀಸಲಾತಿಯ 50% ಮಿತಿಯನ್ನು ಹೆಚ್ಚಿಸಲು ಏಕೆ ನಿರಾಕರಿಸುತ್ತಿದ್ದೀರಿ?

ಧ್ರುವೀಕರಣಕ್ಕಾಗಿ ನೀವು ಅಲ್ಪಸಂಖ್ಯಾತರ ಮೀಸಲಾತಿಯನ್ನು ಏಕೆ ಅಸಮರ್ಥನೀಯವಾಗಿ ಗುರಿಪಡಿಸುತ್ತಿದ್ದೀರಿ?

ಬೊಮ್ಮಾಯಿ ಸರ್ಕಾರವು ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡುವ ಮೂಲಕ ಮೀಸಲಾತಿ ಕುರಿತಾದ ತನ್ನದೇ ಆದ ಸರ್ಕಾರಿ ಆದೇಶವನ್ನು ಏಕೆ ತಡೆಹಿಡಿದಿದೆ?

ಮೀಸಲಾತಿಯ ಹೆಸರಿನಲ್ಲಿ ಬಿಜೆಪಿ ಮಾಡಿದ ದ್ರೋಹಕ್ಕಾಗಿ ಎಸ್ಸಿ, ಎಸ್ಟಿ, ಲಿಂಗಾಯತರು, ಒಕ್ಕಲಿಗರು ಮತ್ತು ಇತರರಿಗೆ ಪ್ರಧಾನಿ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರೆಯೇ? ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕಾಂಗ್ರೆಸ್  ಮುಖಂಡರುಗಳಾದ ಹೇಮಂತ್ ಕುಮಾರ್, ಆರ್. ಮೂರ್ತಿ,ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.