ಬೀದರ್: ದೇಶದಲ್ಲೇ ಕರ್ನಾಟಕ ನಂಬರ್ 1 ಆಗಲು ಡಬಲ್ ಎಂಜಿನ್ ಸರ್ಕಾರ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಘೋಷಿಸುವ ಮೂಲಕ ಪ್ರಧಾನಿ ಗಮನ ಸೆಳೆದರು.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಬಿಜೆಪಿ ಪ್ರಚಾರ ಸಮಾರಂಭದಲ್ಲಿ ನರೇಂದ್ರ ಮೋದಿ ಮಾತನಾಡಿದರು.
ಜಗದ್ಗುರು ಬಸವೇಶ್ವರ ಮತ್ತು ಶಿವಶರಣರ ಭೂಮಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸುತ್ತಿದ್ದಂತೆ ಎಲ್ಲೆಲ್ಲೂ ಮೋದಿ,ಮೋದಿ ಎಂಬ ಕೂಗು ಕೇಳಿಬಂದಿತು.
ಬಸವೇಶ್ವರರ ಆಶೀರ್ವಾದ ನಿಮ್ಮ ಕೆಲಸ ಮಾಡಲು ನನಗೆ ಶಕ್ತಿ ಕೊಡುತ್ತದೆ. ಕರ್ನಾಟಕದ ಕೀರಿಟವಾದ ಬೀದರ್‌ನಲ್ಲಿ ಮೊದಲ ಬಾರಿ ಪ್ರಧಾನಿಯಾದ ವೇಳೆ ನನಗೆ ಆಶೀರ್ವಾದ ಸಿಕ್ಕಿತ್ತು ಎಂದು ಹೇಳಿದರು
ಭಾರಿ ಸಂಖ್ಯೆಯಲ್ಲಿ ಬಂದು ದೇಶಕ್ಕೆ ನೀವು ಸಂದೇಶ ನೀಡುತ್ತಿದ್ದೀರಾ, ಕರ್ನಾಟಕದಲ್ಲಿ ಬಹುಮತದಿಂದ ಬಿಜೆಪಿ ಸರ್ಕಾರದ ಬರಲಿದೆ ಎಂಬ ಸಂದೇಶ ನೀಡಿದ್ದೀರಾ ಎಂದು ಮೋದಿ ತಿಳಿಸಿದರು.
ಇದು ಕೇವಲ ಸರ್ಕಾರ ಮಾಡುವ ಚುನಾವಣೆ ಮಾತ್ರವಲ್ಲ. ದೇಶದಲ್ಲೇ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆ. ಭಾರತದ ಅಭಿವೃದ್ಧಿಯ ಚುನಾವಣೆ ಎಂದು ಮೋದಿ ವರ್ಣಿಸಿದರು.
ಕರ್ನಾಟಕದ ಜನರು ಕನಸುಗಳಿಂದ ದೂರ ಸರಿಯಬಾರದು. ಕಳೆದ ಐದು ವರ್ಷದಿಂದ ನಡೆಯುತ್ತಿರುವ ಅಭಿವೃದ್ಧಿ ನಿಲ್ಲಬಾರದು. ಅಭಿವೃದ್ಧಿ ಮುಂದುವರಿಯಲು ಬಿಜೆಪಿಗೆ ಅಧಿಕಾರ ನೀಡಬೇಕು. ದೇಶದಲ್ಲಿ ಕರ್ನಾಟಕ ನಂಬರ್ ಒನ್ ಆಗಲು ಡಬಲ್ ಎಂಜಿನ್ ಸರ್ಕಾರದ ಅಗತ್ಯ ಇದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದಿಂದ ಕರ್ನಾಟಕ ನಂಬರ್ ಒನ್ ಆಗಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಗಣನೀಯ ಪ್ರಮಾಣದ ವಿದೇಶಿ ಹೂಡಿಕೆಯಾಗಿದೆ. ಕಾಂಗ್ರೆಸ್ ಅವಧಿಯಲ್ಲಿ 30,000 ಕೋಟಿ ಹೂಡಿಕೆ ಬರುತ್ತಿತ್ತು. ಈಗ 90,000 ಕೋಟಿ ಹೂಡಿಕೆ ಬರುತ್ತಿದೆ ಎಂದು ಮೋದಿ ಹೇಳಿದರು.
ಕೊರೊನಾ ನಡುವೆಯೂ ನಾವು ಈ ಪ್ರಮಾಣದ ಹೂಡಿಕೆ ತಂದಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಸ್ಪೀಡ್ ಇರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಸಾಕಷ್ಟು ಯೋಜನೆಗಳು ಧೂಳು ತಿನ್ನುತ್ತಿದೆ. ಬಹಳಷ್ಟು ಯೋಜನೆಗಳನ್ನು ನಾವು ಮಾಡಿದ್ದೇವೆ. ಅದರಲ್ಲಿ ಹಲವು ಯೋಜನೆ ಕರ್ನಾಟಕದವು ಇದೆ ಎಂದು ತಿಳಿಸಿದರು.
ಬೀದರ್‌ನ ಯೋಜನೆಗಳೂ ಇವೆ. ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಸಾಕಷ್ಟು ಲಾಭವಾಗಿದೆ. ಅಲ್ಲಿ ಇಲ್ಲಿ ಓಡಾಡುವ ಅವಶ್ಯಕತೆ ಇಲ್ಲ. ಕೃಷಿ ಸಮ್ಮಾನ್ ಯೋಜನೆ ಶುರು ಮಾಡಿದಾಗ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಇತ್ತು. ಅವರು ರೈತರ ಮಾಹಿತಿ ನೀಡುತ್ತಿರಲಿಲ್ಲ. ಕಾಂಗ್ರೆಸ್‌ಗೆ ರೈತರ ಮೇಲೆ ಎಷ್ಟು ದ್ವೇಷ ಇದೆ ಎಂದು ಕಿಡಿಕಾರಿದರು.
ಚುನಾವಣೆಗೆ ಮುನ್ನ ಸಾಲ ಮನ್ನಾ ಮಾಡುವ ಭರವಸೆಯ ನಾಟಕ ಮಾಡುತ್ತಾರೆ. ಆದರೆ ಸಾಲ ಮನ್ನಾ ಆಗಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

