ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿ; ಮೋದಿ ದೇವರ ಹೆಸರಲ್ಲಿ ರಾಜಕೀಯ ನಡೆಸಲು ಯತ್ನ -ಡಿಕೆಶಿ

ಮೈಸೂರು: ದೇವರ ಹೆಸರಿನಲ್ಲಿ ಪ್ರಧಾನಿ ಹಾಗೂ ಬಿಜೆಪಿಯವರು ರಾಜಕೀಯ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮೈಸೂರಿಗೆ ಭೇಟಿ ನೀಡಿದ ಅವರು ಗುರುವಾರ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿರುವ ಆಂಜನೇಯಸ್ವಾಮಿಗೆ ಡಿಕೆಶಿ ಶಿರಬಾಗಿ ನಮಸ್ಕರಿಸಿ ಪ್ರಾರ್ಥಿಸಿದರು.

ಬೆಟ್ಟದಲ್ಲಿ ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಂಜನೇಯ ಹುಟ್ಟಿದ ಸ್ಥಳ ಅಂಜನಾದ್ರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ವಿಶೇಷ ಮಂಡಳಿ ರಚನೆ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಗರಿಗೆ ಗಾಬರಿಯಾಗಿದೆ.

ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿದೆ. ಭಜರಂಗದಳ ಒಂದು ರಾಜಕೀಯ ಪಕ್ಷದ ಭಾಗ. ಹುಟ್ಟುವ ಎಲ್ಲವೂ ಬಸವ ಆಗುವುದಕ್ಕೆ ಸಾಧ್ಯವಿಲ್ಲ. ಹನುಮಂತನ ಹೆಸರಿಟ್ಟುಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಜರಂಗದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ,ಬಜರಂಗ ಬಲಿಯ ನಿಜವಾದ ಭಕ್ತರು ನಾವು, ಬಜರಂಗಿಯ ಕುಂಕುಮ ನನ್ನ ಹಣೆಯಲ್ಲಿಯೇ ಇದೆ ಎಂದು ಹೇಳಿದರು.

ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ.

ಯುವಕರಿಗೆ ಆಂಜನೇಯನ ವಿಚಾರಗಳನ್ನು ತಿಳಿಸಲು ವಿಶೇಷ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು

ಬಿಜೆಪಿಯವರು ಒಂದಾದರೂ ಆಂಜನೇಯನ ದೇವಾಲಯವನ್ನು ಕಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಯಾರಿಗೆ ಏನೂ ಸಹಾಯ ಮಾಡಿದ್ದೇವೆ, ಕೆಲಸ ಮಾಡಿದ್ದೇವೆ ಎಂದು ಪ್ರಧಾನಿಗಳು ಭಾಷಣದಲ್ಲಿ ಹೇಳುತ್ತಿಲ್ಲ ಎಂದು ಡಿಕೆಶಿ ಟೀಕಿಸಿದರು.

ಕಾಂಗ್ರೆಸ್ ಪ್ರಾಣಾಳಿಕೆಯನ್ನು ಈಶ್ವರಪ್ಪ ಸುಟ್ಟು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಫಲವಾಗಿ ಬಿಜೆಪಿಗರು ಈಶ್ವರಪ್ಪನನ್ನೆ ಸುಟ್ಟು ಹಾಕಿದ್ದಾರೆ ಎಂದು ತಿರುಗೇಟು ನೀಡಿದರು.

ಗರ್ಭಗುಡಿಯಲ್ಲಿ ರುದ್ರಾಕ್ಷಿ ಜಪ ಮಾಡಿದ್ದೇನೆ, ರಾಜ್ಯಕ್ಕೆ ಬಂದಿರುವ ದುಃಖವನ್ನು ದೂರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.