ಸಿದ್ದರಾಮಯ್ಯ ವಿರುದ್ಧ 40 ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡಿದ‌ ಬಿಜೆಪಿ

ಮೈಸೂರು: ಮುಡಾದಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಡಿ.ನೋಟಿಫೀಕೇಶನ್ ಮಾಡಿಸಿ, ಅದನ್ನು ಪತ್ನಿ ಹೆಸರಿಗೆ ಖರೀದಿಸಿ ಆ ಜಮೀನಿಗೆ ಪರಿಹಾರವಾಗಿ ವಿಜಯನಗರದಲ್ಲಿ 14 ನಿವೇಶನಗಳನ್ನು ಪಡೆದು ಸಿದ್ದರಾಮಯ್ಯ ಅವರು 40 ಕೋಟಿ ರೂಗೂ ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಸೋಮವಾರ ಮೈಸೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಈ ಆರೋಪ ಮಾಡಿದರು.

ಜತೆಗೆ ಸಿದ್ದರಾಮಯ್ಯ‌ ಅವರು‌ ತಮ್ಮ ಪತ್ನಿ ಹೆಸರಿನಲ್ಲಿ ನಡೆಸಿರುವ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ದೇವನೂರು 3ನೇ ಹಂತದ ಬಡಾವಣೆಗಾಗಿ ಕೆಸರೆ ಗ್ರಾಮದ ಸರ್ವೇ ನಂಬರ್ 464 ರಲ್ಲಿ ಶ್ರೀ ನಿಂಗ ಎಂಬವರ ಹೆಸರಿನಲ್ಲಿದ್ದ 3-16 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿತ್ತು.

ಆ ನಂತರದ ದಿನಗಳಲ್ಲಿ ಭೂಸ್ವಾಧೀನವನ್ನು ಕೈಬಿಟ್ಟು ಅಧಿಸೂಚನೆಯನ್ನು ರದ್ದುಪಡಿಸಲಾಯಿತು.

2005ರಲ್ಲಿ ಈ ಜಮೀನನ್ನು ಸಿದ್ದರಾಮಯ್ಯ ನವರ ಭಾಮೈದ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿ, ಆ ಜಮೀನನ್ನು ತಮ್ಮ ಸಹೋದರಿ ಯಾದ ಸಿದ್ದರಾಮಯ್ಯ ನವರ ಪತ್ನಿ ಪಾರ್ವತಿಯವರಿಗೆ ಅರಿಶಿಣ-ಕುಂಕುಮದ ಉಡುಗೊರೆ ಎಂದು ನೀಡಿದ್ದಾರೆ.

ಅದನ್ನು ಪಾರ್ವತಿ ಯವರು ತಮ್ಮ ಹೆಸರಿಗೆ ನೋಂದಣಿ ಮಾಡಿಸಿ ಕೊಂಡಿದ್ದಾರೆ. ಅಲ್ಲದೇ ಪಾರ್ವತಿ ಅವರು ಮುಡಾಗೆ ಅರ್ಜಿ ಸಲ್ಲಿಸಿ, ಭೂಸ್ವಾಧೀನದಿಂದ ಹೊರತುಪಡಿಸಿ ರುವ ಭೂಮಿಯನ್ನು ಪ್ರಾಧಿಕಾರವು ಉಪಯೋಗಿಸಿ ಕೊಂಡಿರುವುದರಿಂದ, ತಮ್ಮ ಜಮೀನಿನ ಬದಲಿಗೆ ಅಷ್ಟೇ ವಿಸ್ತೀರ್ಣದ ಜಮೀನನ್ನು ಪ್ರಾಧಿಕಾರದ ಸಮಾನಾಂತರ ಬಡಾವಣೆ ಯಲ್ಲಿ ನೀಡುವಂತೆ ಕೋರಿದ್ದರು.

ಅವರ‌ ಕೋರಿಕೆ ಮೇರೆಗೆ 2017ರ ಡಿಸೆಂಬರ್ 15ರಂದು ಮತ್ತು ಅದೇ ತಿಂಗಳ 30 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಸದರಿ ಜಮೀನಿಗೆ ಬದಲಾಗಿ ಅಭಿವೃದ್ಧಿ ಪಡಿಸದೆ ಇರುವ ಜಮೀನನ್ನು ನೀಡುವುದೆಂದು ನಿರ್ಣಯಿಸಲಾಯಿತು.

ಅಲ್ಲದೇ ವಿಜಯನಗರ ಎರಡನೇ ಹಂತದಲ್ಲಿ ಶೇ 50-50 ಅನುಪಾತ ದಲ್ಲಿ 14 ನಿವೇಶನ ಗಳನ್ನು ಸಿದ್ದರಾಮಯ್ಯ ನವರ ಪತ್ನಿ ಪಾರ್ವತಿ ಯವರಿಗೆ ನೀಡಲಾಗಿದೆ.

ಕೆಸರೆಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನ ಚದರ ಅಡಿ ಬೆಲೆ ಮೂರು ಸಾವಿರ ರೂಗಳಾದರೆ, ಮೈಸೂರಿನ ವಿಜಯ ನಗರದಲ್ಲಿ ಪಾರ್ವತಿ ಯವರಿಗೆ ನೀಡಿರುವ ನಿವೇಶನದ ಚದರ ಅಡಿ ಬೆಲೆ 8ರಿಂದ 9 ಸಾವಿರ ರೂಗಳಾಗಿದೆ.

ಕಾನೂನು ಪ್ರಕಾರ ಸ್ವಾಧೀನ ಪಡಿಸಿಕೊಂಡ ಜಮೀನಿನ ಆಸು ಪಾಸಿನಲ್ಲಿ ಬದಲಿ ನಿವೇಶನ ನೀಡಬೇಕಾಗಿತ್ತು.

ಆದರೆ ಮೈಸೂರಿನ ವಿಜಯನಗರದ ದಲ್ಲಿ ಸುಮಾರು 40ಕೋಟಿ ಬೆಲೆ ಬಾಳುವ ನಿವೇಶನ ಗಳನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ಸುಮಾರು 30 ಕೋಟಿ ರೂಗಳ ಹಗರಣ ನಡೆದಿದೆ ಎಂದು ಎಂ.ಜಿ.ಮಹೇಶ್‌ ದೂರಿದರು.

ಸಂಬಂಧಿಸಿದ ಅಧಿಕಾರಿಗಳು, ಮುಡಾ ಅಧ್ಯಕ್ಷರು ಸಿದ್ದರಾಮಯ್ಯ ನವರ ಪತ್ನಿ ಗೆ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ ಅವರು ಪ್ರಕರಣದ ಬಗ್ಗೆ ವಿವರಿಸಿದರು.

ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ನವರೇ ಪತ್ನಿ ಹೆಸರಿನಲ್ಲಿ ಅತಿದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಸಿದ್ದರಾಮಯ್ಯ ನವರು ವರುಣ ಕ್ಷೇತ್ರದಲ್ಲಿ ಈ ಬಾರಿ ಸೋಲುವುದು ನಿಶ್ಚಿತ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿ ಹೋದ ಬಳಿಕ ಎಲ್ಲೆಲ್ಲೂ ಬಿಜೆಪಿ ಅಲೆ ಹೆಚ್ಚಾಗಿದೆ, ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಂ.ಜಿ.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿ ಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದ ಸಂಯೋಜಕ ನಾಗೇಶ್, ಮಾಧ್ಯಮ ಸಹ ಸಂಚಾಲಕ ಕೇಬಲ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.