ಗೆಲುವು ಸಾಧಿಸಿ ಬೀಗಿದರೂ ಸಿಎಂ ಪೀಠದ ಕಗ್ಗಂಟಿನಿಂದ ಹೊರಬಾರದ ಕಾಂಗ್ರೆಸ್

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಡೆದು   ಭರ್ಜರಿ ಗೆಲುವು ಪಡೆದು ಬೀಗುತ್ತಿರುವ ಕಾಂಗ್ರೆಸ್ ನಲ್ಲಿ ಈಗ ಮುಖ್ಯ ಮಂತ್ರಿ ಗಾದಿಗಾಗಿ ಫೈಟ್ ಪ್ರಾರಂಭವಾಗಿದೆ

ಸಿಎಂ ಹುದ್ದೆ ಮೇಲೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಕಣ್ಣಿಟ್ಟಿದ್ದು ಈ‌ ಪೀಠ ಯಾರಿಗೆ ಒಲಿಯಲಿದೆಯೊ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಭಾನುವಾರ ತಡರಾತ್ರಿ ತನಕ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದರೂ ಮುಖ್ಯ ಮಂತ್ರಿ ಯಾರಾಗಬೇಕೆಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಹಾಗಾಗಿ ಕಗ್ಗಂಟನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಡಲಾಗಿದೆ.

ಆದ್ದರಿಂದ ದೆಹಲಿಯಿಂದ ಬುಲಾವ್ ಬಂದ ಕಾರಣ ಸೋಮವಾರ ಮಧ್ಯಾಹ್ನ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ದೆಹಲಿಗೆ ಹೋಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಲಿದ್ದಾರೆ.

ಭಾನುವಾರ ರಾತ್ರಿ ನಡೆದ ಸಭೆಯಲ್ಲಿ ‌ಡಿಕೆಶಿ ಮತ್ತು ಸಿದ್ದು ನಡುವೆ ಮಾತಿನ ಚಕಮಕಿ ನಡೆದಿದೆ.

ಕೊನೆಗೆ ಸಿದ್ದರಾಮಯ್ಯ 5 ವರ್ಷಗಳ ಅವಧಿಯಲ್ಲಿ ಶಿವಕುಮಾರ್ ರೊಂದಿಗೆ ಸಿಎಂ ಹುದ್ದೆಯ ಅವಧಿಯನ್ನು ಹಂಚಿಕೊಳ್ಳಲು ಸಿದ್ಧ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ತಾವು ಮುಖ್ಯಮಂತ್ರಿಯಾಗಬೇಕು, 2 ವರ್ಷಗಳ ನಂತರ ಮುಂದಿನ 3 ವರ್ಷಗಳಿಗೆ ಡಿ. ಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸುತ್ತೇನೆ ಎಂದು ಸಿದ್ದು ಹೇಳಿದ್ದಾರೆ.

ಮೇ 18ಕ್ಕೆ ನೂತನ ಸಿಎಂ ಪ್ರಮಾಣ ವಚನ: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ನಿರ್ಧಾರವಾಗದಿದ್ದರೂ ಪದವಿ ಸ್ವೀಕಾರ ಸಮಾರಂಭ ಮೇ 18ಕ್ಕೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ

ಸೋಮವಾರ ಡಿಕೆಶಿ ಜನುಮದಿನ: ಮೆ15.ಸೋಮವಾರ ಡಿ. ಕೆ ಶಿವಕುಮಾರ್ ಜನುಮದಿನ. 61 ವರ್ಷಗಳನ್ನು ಪೂರೈಸಿ 62ನೇ ವಸಂತಕ್ಕೆ ಕಾಲಿಟ್ಟಿರುವ ಡಿ.ಕೆಶಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಸಿಎಂ ಯಾರಾಗಬೇಕೆಂದು ನಿರ್ಧಾರ ಮಾಡಲು ನಾವು ನಿರ್ಣಯವನ್ನು ಹೈಕಮಾಂಡ್ ಗೆ ಕಳುಹಿಸುತ್ತಿದ್ದು ಅವರು ನಿರ್ಧರಿಸುತ್ತಾರೆ ಎಂದು ಹೇಳಿದರು

ದೆಹಲಿಗೆ ಹೋಗಬೇಕೆ ಬೇಡವೇ ಎಂದು ಇನ್ನೂ ನಿರ್ಧಾರ ಮಾಡಿಲ್ಲ. ನನ್ನ ಮನೆಗೆ ಹೋಗುತ್ತೇನೆ. ನನ್ನ ಬರ್ತ್ ಡೇಗೆ ಹೈಕಮಾಂಡ್ ಏನು ಗಿಫ್ಟ್ ಕೊಡುತ್ತದೆ ಎಂದು ಗೊತ್ತಿಲ್ಲ. ಆದರೆ ಕರ್ನಾಟಕ ಜನತೆ ಈ ಬಾರಿ 135 ಸಂಖ್ಯೆಯ ಗಿಫ್ಟ್ ನೀಡಿ ಗೆಲ್ಲಿಸಿದ್ದಾರೆ, ಇದಕ್ಕಿಂತ ದೊಡ್ಡ ಗಿಫ್ಟ್ ಏನು ಬೇಕು ಎಂದರು.

ಸಿಎಂ ಆಯ್ಕೆ ವಿಷಯ ಈಗ ದೆಹಲಿಗೆ ತಲುಪಿದ್ದು ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ ವೀಕ್ಷಕರು ಹೈಕಮಾಂಡ್ ಗೆ ಸಲ್ಲಿಸಿದ್ದಾರೆ.

ಈ ಕುರಿತು ಹರಿಪ್ರಸಾದ್ ಪ್ರತಿಕ್ರಿಯಿಸಿ ಶಾಸಕರ ನಿರ್ಧಾರವನ್ನು ದೆಹಲಿಗೆ ಕಳುಹಿಸಲಾಗಿದ್ದು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.