ನವದೆಹಲಿ: ಕಾಂಗ್ರೆಸ್ ಹೈಡ್ರಾಮಕ್ಕೆ ಕೊನೆಗೂ ತೆರೆಬಿದ್ದಿದ್ದು,ದೇಶದೆಲ್ಲೆಡೆ ತೀವ್ರ ಕುತೂಹಲ ಉಂಟುಮಾಡಿದ್ದ ಮುಖ್ಯ ಮಂತ್ರಿ ಗದ್ದುಗೆ ಸಿದ್ದರಾಮಯ್ಯ ಅವರಿಗೇ ಒಲಿದಿದೆ.
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ.
ಬುಧವಾರ ರಾತ್ರಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರ ಜೊತೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ.
ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಮಲ್ಲಿಕಾರ್ಜುನ ಖರ್ಗೆಯವರು ತೀರ್ಮಾನಿಸಿದರು. ಪಟ್ಟು ಬಿಡದ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಸಹ ಹೈಕಮಾಂಡ್ ತೀರ್ಮಾನಕ್ಕೆ ಒಪ್ಪಿಕೊಂಡಿದ್ದಾರೆ.
ಖರ್ಗೆ ಅವರು ಡಿಕೆಶಿ ಹಾಗೂ ಸಿದ್ದು ಇಬ್ಬರ ಕೈಗಳನ್ನು ಮೇಲೆತ್ತಿ ಇಬ್ಬರೂ ಒಟ್ಟಾಗಿದ್ದಾರೆಂದು ಹೇಳುವ ಪ್ರಯತ್ನ ಮಾಡಿದ್ದಾರೆ.
ಜತೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಒಟ್ಟಿಗೇ ಖರ್ಗೆ ಅವರ ನಿವಾಸಕ್ಕೆ ಹೋಗುವ ಮೂಲಕ ತಾವಿಬ್ಬರೂ ಒಗ್ಗಟ್ಟಾಗಿದ್ದೇವೆಂದು ತೋರ್ಪಡಿಸಿದ್ದಾರೆ.
ಆರಂಭದ ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಉಳಿದ ಎರಡೂವರೆ ವರ್ಷ ಡಿ ಕೆ ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸುವಂತೆ ಮಲ್ಲಿಕಾರ್ಜುನ ಖರ್ಗೆಯವರು ಸೂಚಿಸಿದ್ದಾರೆ.
ಡಿ ಕೆ ಶಿವಕುಮಾರ್ ಗೆ ಉಪ ಮುಖ್ಯಮಂತ್ರಿ ಪಟ್ಟ: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತ ಡಿ ಕೆ ಶಿವಕುಮಾರ್.
ಆದರೂ ಹೈಕಮಾಂಡ್ ಸೂತ್ರಕ್ಕೆ ಒಪ್ಪಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್ ನಿವಾಸದಲ್ಲಿ ಗುರುವಾರ ಬೆಳಗ್ಗೆ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಸಹ ಭಾಗವಹಿಸಿದ್ದರು
ಶನಿವಾರ ಪ್ರಮಾಣವಚನ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಸಿದ್ದರಾಮಯ್ಯನವರು ಇದೇ ಶನಿವಾರ ಮೇ 20ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಶನಿವಾರ ಮಧ್ಯಾಹ್ನ 12.30ಕ್ಕೆ ಪದಗ್ರಹಣ ನಡೆಯಲಿದ್ದಯ ಭರದ ಸಿದ್ಧತೆ ನಡೆಯುತ್ತಿದೆ.
ಸಿದ್ದರಾಮಯ್ಯ ನಿವಾಸದ ಹೊರಗೆ ಬಿಗಿ ಭದ್ರತೆ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ವರದಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಅವರ ಹುಟ್ಟೂರು ಸಿದ್ದರಾಮನ ಹುಂಡಿಯಲ್ಲಿ ಜನರ ಹರ್ಷ ಮುಗಿಲುಮುಟ್ಟಿದೆ.
ಬೆಂಗಳೂರಿನಲ್ಲಿರುವ ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಅವರ ನಿವಾಸದ ಸುತ್ತಮುತ್ತ ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿವೆ.
ಸಂಜೆ ಸಿಎಲ್ ಪಿ ಮೀಟಿಂಗ್: ನೂತನ ಮುಖ್ಯಮಂತ್ರಿ ಆಯ್ಕೆಯಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗುರುವಾರ ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ.

