ಬೆಂಗಳೂರು: ಬಿಜೆಪಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಇಡೀ ದೇಶದ ಗಮನ ಸೆಳೆದಿರುವ ರಾಜ್ಯ ಕಾಂಗ್ರೆಸ್ ನೂತನ ಸರ್ಕಾರ ರಚನೆಯ ಮುಹೂರ್ತ ಜಾತ್ಯತೀತ ಶಕ್ತಿಗಳ ಬಲ ಪ್ರದರ್ಶನಕ್ಕೆ ವೇದಿಕೆಯಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ವರಿಷ್ಠ ರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ದೇಶದ ಇತರ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳೂ ಭಾಗವಹಿಸಲಿದ್ದಾರೆ.
ಅಲ್ಲದೆ, ಆಂಧ್ರ ಪ್ರದೇಶದ ವೈ.ಎಸ್.ಜಗನ್‍ಮೋಹನರೆಡ್ಡಿ, ಬಿಹಾರದ ನಿತೀಶ್ ಕುಮಾರ್, ದೆಹಲಿಯ ಕೇಜ್ರಿವಾಲ್, ಪಂಜಾಬ್‍ನ ಭಗವಂತ್ ಸಿಂಗ್ ಮಾನ್, ಜಾರ್ಖಂಡ್‍ನ ಹಿಮಂತ್ ಸುರೇನ್, ಕೇರಳದ ಪಿಣರಾಯಿ ವಿಜಯನ್, ಮಹಾರಾಷ್ಟ್ರದ ಏಕನಾಥ್ ಶಿಂಧೆ, ಮೇಘಾಲಯದ ಪೋರ್‍ನಾಡ್ ಸಂಗಮ್, ಒಡಿಶಾದ ನವೀನ್ ಪಟ್ನಾಯಕ್, ಪುದುಚೇರಿಯ ಎನ್.ರಂಗಸ್ವಾಮಿ, ತಮಿಳುನಾಡಿನ ಎಂ.ಕೆ.ಸ್ಟಾಲಿನ್, ತೆಲಂಗಾಣದ ಕೆ.ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.
ಇದಲ್ಲದೆ, ಎಡಪಕ್ಷಗಳ ನಾಯಕರಾದ ಡಿ.ರಾಜ, ಪ್ರಕಾಶ್ ಕಾರಟ್, ನ್ಯಾಷನಲ್ ಕಾನ್ಫರೆನ್ಸ್ ನ ಓಮರ್ ಅಬ್ದುಲ್ಲಾ, ಬಿಎಸ್‍ಪಿಯ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎನ್‍ಸಿಪಿಯ ಶರದ್‍ಪವಾರ್ ಯಾದವ್, ಶಿವಸೇನೆಯ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಜಾತ್ಯತೀತ ಪಕ್ಷಗಳ ಪ್ರಮುಖರಿಗೆ, ಬಿಜೆಪಿಯೇತರ ರಾಜ್ಯಗಳಲ್ಲಿನ ವಿಪಕ್ಷಗಳ ಪ್ರಮುಖರಿಗೂ ಆಹ್ವಾನ ನೀಡಲಾಗಿದೆ.
ಈ ಹಿಂದೆ 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗುವ ವೇಳೆ ಇದೇ ರೀತಿಯ ಜಾತ್ಯತೀತ ಶಕ್ತಿಗಳ ಬಲ ಪ್ರದರ್ಶನ ನಡೆದಿತ್ತು. ಆ ವೇಳೆ ಹಲವು ಮುಖ್ಯಮಂತ್ರಿಗಳು ಹಾಗೂ ಪ್ರಮುಖ ಗಣ್ಯ ನಾಯಕರು ಭಾಗವಹಿಸಿದ್ದರು.
ಈಗ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಜಾತ್ಯತೀತ ಶಕ್ತಿಗಳಲ್ಲಿನ ವಿಶ್ವಾಸವನ್ನು ಹೆಚ್ಚಿಸಿದೆ.
ಸಂಸತ್‍ನಲ್ಲಿ ಏಕಸಾರ್ವಭೌಮತ್ವ ಹಾಗೂ ಸರ್ವಾಧಿಕಾರಿ ಮಾದರಿಯ ಆಡಳಿತಕ್ಕೆ ಬ್ರೇಕ್ ಹಾಕಲು ಸುಮಾರು 28 ವಿಪಕ್ಷಗಳು ಒಂದೇ ವೇದಿಕೆಯಲ್ಲಿ ಸೇರ್ಪಡೆಯಾಗಲಿವೆ.
ಸಂಸತ್ ಅಧಿವೇಶನದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದವು. ಇದು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು. ಒಂದು ಹಂತದಲ್ಲಿ ಪ್ರಧಾನಿಯವರು ವಿಪಕ್ಷಗಳ ವಿರುದ್ಧ ಮುಗಿಬಿದ್ದು ನಿಮ್ಮೆಲ್ಲ ಶಕ್ತಿಗೂ ನಾನೊಬ್ಬನೇ ಸಾಕು ಎಂದು ತಿರುಗೇಟು ನೀಡಿದ್ದರು.
ಅದೇ ಹುಮ್ಮಸ್ಸಿನಲ್ಲಿ ರಾಜ್ಯದಲ್ಲೂ ಸರಣಿ ಪ್ರಚಾರ ನಡೆಸಿದರು. ರೋಡ್‍ಶೋಗಳಾದವು. ಆದರೆ, ಜನ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ಗಮನಾರ್ಹ.
ಈ ಹಿಂದೆ ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗಲೆಲ್ಲ ಕರ್ನಾಟಕದಿಂದಲೇ ಬಲವರ್ಧನೆಯ ಮುನ್ನುಡಿ ಬರೆದಿರುವ ಸಾಕಷ್ಟು ಉದಾಹರಣೆಗಳಿವೆ.
ಅದೇ ರೀತಿ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೂ ಕರ್ನಾಟಕ ಕಾಂಗ್ರೆಸ್‍ನಿಂದಲೇ ಸಂದೇಶ ರವಾನಿಸುವ, ಪಕ್ಷಕ್ಕೆ ಮರು ಚೈತನ್ಯ ನೀಡುವ ಆಲೋಚನೆಗಳು ನಡೆಯುತ್ತಿವೆ.
ಅದಕ್ಕೆ ಸಿದ್ದರಾಮಯ್ಯ ಅವರ ಸರ್ಕಾರದ ಪ್ರತಿಷ್ಠಾಪನಾ ವೇದಿಕೆ ಒಂದು ನೆಪವಾಗುತ್ತಿದ್ದು, ಜಾತ್ಯತೀತ ಶಕ್ತಿಗಳ ಕ್ರೋಢೀಕರಣ ಬಿರುಸಿನಿಂದ ನಡೆಯುತ್ತಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭ:
ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಸಮಾರಂಭದ ಸಿದ್ಧತೆ ಭರದಿಂದ ಸಾಗಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು ಕ್ರೀಡಾಂಗಣದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ವಿವಿಐಪಿಗಳ ಪ್ರವೇಶಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 2 ಗೇಟ್ಗಳಲ್ಲಿ ವಿವಿಐಪಿ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪೊಲೀಸ್ ಕಮಿಷನರ್, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ.
8 ಮಂದಿ ಡಿಸಿಪಿ, 10 ಮಂದಿ ಎಸಿಪಿ, 28 ಇನ್ಸ್ ಪೆಕ್ಟರ್ಗಳು, 1,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಸಂಚಾರ ನಿರ್ವಹಣೆಗಾಗಿ 500 ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಲ್ಲಾ ಸಿದ್ಧತೆಗಳನ್ನು ಖುದ್ದು ಡಿ.ಕೆ.ಶಿವಕುಮಾರ್ ಅವರೇ ಪರಿಶೀಲನೆ ಮಾಡಿ ಅಗತ್ಯ ಸಲಹೆ ನೀಡಿದ್ದಾರೆ.

