ಬೆಂಗಳೂರು: ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಸ್ಕೀಂ ಕೊಡಲಾಗುವುದಿಲ್ಲ ಎಂಬ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುಂಚೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿ ಜಾರಿಯ ಭರವಸೆ ಕೊಟ್ಟಿದ್ದರು ಎಂದು ಹೇಳಿದರು.
ಜಾರಿಗೆ ತರುವುದು ಬಿಡುವುದು ಮುಂದಿನ ವಿಚಾರ. ಆದರೆ ಈಗ ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡಲಾಗುವುದಿಲ್ಲ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದು ಮತ್ತು ಡಿಕೆಶಿ ಮತದಾರರ ಕಾಲಿಗೆ ಬಿದ್ದು ಮತ ಪಡೆದು ಸಿಎಂ ಹಾಗೂ ಡಿಸಿಎಂ ಆಗಿದ್ದಾರೆ. ಈಗ ಅದೇ ಜನರಿಗೆ ಹಾದಿ ಬೀದಿಯಲ್ಲಿ ಹೋಗುವವರು ಎನ್ನುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮತ್ತೆ ಅದೇ ಜನರ ಎದುರು ಚುನಾವಣೆಗೆ ಮತ ಕೇಳಲು ಹೋಗಬೇಕು. ಆಗ ಹಾದಿ ಬೀದಿಯಲ್ಲಿ ಹೋಗುವವರ ಬಳಿ ಮತ ಕೇಳಬೇಡಿ ಎಂದು ಇವರಿಬ್ಬರಿಗೆ ಜನ ಛೀಮಾರಿ ಹಾಕಿ ಮನೆಗೆ ಕಳುಹಿಸುತ್ತಾರೆ ಎಂದು ಟೀಕಿಸಿದರು.
ಚುನಾವಣೆಗೂ ಮೊದಲು ಎಲ್ಲರಿಗೂ ಉಚಿತ ಎಂದು ಭರವಸೆ ಕೊಟ್ಟರು. ಅದರೆ ಈಗ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವ ರೀತಿ ಸರಿಯಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷ ರಾಜ್ಯದ ಮತದಾರರಿಗೆ ಅವಮಾನ ಮಾಡಿದೆ. ಸಿಎಂ ಮತ್ತು ಡಿಸಿಎಂ ಇಬ್ಬರೂ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ರಾಜ್ಯದ ಜನ ಹಾದಿ ಬೀದಿಯಲ್ಲಿ ಹೋಗುವವರಲ್ಲಾ. ಜನ ನಿಮ್ಮ ಕಾಲಿಗೆ ಬಿದ್ದು ಮತಕೊಡುತ್ತೇವೆ ಎಂದು ಹೇಳಿಲ್ಲ. ನೀವೇ ಜನರ ಕಾಲಿಗೆ ಬಿದ್ದು ಮತ ಕೊಡಿ ಎಂದು ಕೇಳಿದ್ದು.
ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೊದಲ ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಜಾರಿಗೆ ತರದಿರುವುದು ಜನರಿಗೆ ಮಾಡಿದ ದ್ರೋಹ ಎಂದು ಹೇಳಿದರು.
ಹಾದಿ ಬೀದಿಯಲ್ಲಿ ಹೋಗುವವರಿಗೆ ಗ್ಯಾರಂಟಿ ಇಲ್ಲ ಎಂದು ಹೇಳಿದ ಬಗ್ಗೆ ಹೋರಾಟ ಮಾಡುತ್ತೇವೆ. ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡಿ ಹೋರಾಟದ ರೂಪುರೇಷೆ ಮಾಡುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.

