ಎಸ್ ಎಂ ಕೆ ಆಶೀರ್ವಾದ ಪಡೆದ‌ ಡಿಕೆಶಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನನ್ನ ರಾಜಕೀಯ ಗುರುಗಳು‌, ಹಾಗಾಗಿ ಅವರ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ವಿಧಾನಸಭೆ ನೂತನ ಸದಸ್ಯರಾಗಿ  ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದೇನೆ ಆದ್ದರಿಂದ ನನಗೆ ರಾಜಕೀಯವಾಗಿ ಪ್ರೋತ್ಸಾಹ ನೀಡಿರುವ ಎಸ್.ಎಂ. ಕೃಷ್ಣ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ  ಪಡೆಯಲು ಅವರ ನಿವಾಸಕ್ಕೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು.

ಈ ವೇಳೆ ನನಗೆ ಬೆಂಗಳೂರು ಇತಿಹಾಸವೆಂಬ ಪುಸ್ತಕ ನೀಡಿದ್ದಾರೆ. ಕೃಷ್ಣ ಅವರು ಬಹಳ ದೂರದೃಷ್ಟಿಯಿಂದ ಈ ಪುಸ್ತಕ ನೀಡಿದ್ದಾರೆ ಎಂದು ಡಿಕೆಶಿ ಹೇಳಿದರು.

ಮಳೆಗೆ ಬ್ಯಾಟರಾಯನಪುರದಲ್ಲಿ ಯುವಕ ಕೊಚ್ಚಿ ಹೋಗಿದ್ದಾನಲ್ಲಾ ಎಂಬ ಪ್ರಶ್ನೆಗೆ,

ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲೇ ಇಂತಹ ದುರ್ಘಟನೆ ನಡೆಯುತ್ತಿರುವುದು ದುರಾದೃಷ್ಟಕರ ಎಂದು ವಿಷಾದಿಸಿದರು.

ಈ ಹಿಂದೆ ಕೇಂದ್ರ ಸರ್ಕಾರ ನರ್ಮ್ ಯೋಜನೆ ಮೂಲಕ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಹಳ ನೆರವು ನೀಡಿತ್ತು, ಈಗಲೂ ನಗರಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಂಡಿವೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.

ಬೆಂಗಳೂರಿನ ಪ್ರಮುಖ ಅಂಡರ್ ಪಾಸ್ ಗಳ ಅವ್ಯವಸ್ಥೆ ಕುರಿತು ವರದಿ ತರಿಸಿಕೊಡು ಮತ್ತೆ ಈ ರೀತಿ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದೆ. ಪ್ರತಿಯೊಂದು ಜೀವ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ತಿಳಿಸಿದರು.