ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ; ಶೀಘ್ರ ಮಸೂದೆ ಮಂಡನೆ -ಶಾ

ನವದೆಹಲಿ: ಜನನ ಹಾಗೂ ಮರಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ಮತದಾರರ ಪಟ್ಟಿಗೆ ಜೋಡಿಸಲು ಸಂಸತ್ತಿನಲ್ಲಿ ಮಸೂದೆಯನ್ನು ತರಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ವ್ಯಕ್ತಿಯ ಜನನ ಹಾಗೂ ಮರಣದ ನೋಂದಣಿಯನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕ್ರಿಯೆಯ ಅಡಿಯಲ್ಲಿ ಒಬ್ಬ ವ್ಯಕ್ತಿಗೆ 18 ವಯಸ್ಸು ತುಂಬಿದಾಗ ಆತನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿ ಸತ್ತಾಗ ಆ ಮಾಹಿತಿ ಸ್ವಯಂಚಾಲಿತವಾಗಿ ಚುನಾವಣಾ ಆಯೋಗಕ್ಕೂ ಹೋಗಲಿದ್ದು, ಆತನ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗುತ್ತದೆ ಎಂದು ತಿಳಿಸಿದರು.

ಜನನ ಮತ್ತು ಮರಣ ನೋಂದಣಿ ಕಾಯಿದೆ 1969 ರ ತಿದ್ದುಪಡಿ ಮಸೂದೆಯು ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಹಾಗೂ ಇತರ ಜನರಿಗೆ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ನೀಡಲು ಸಂಬಂಧಿಸಿದ ವಿಷಯಗಳನ್ನು ಸಹ ಸುಗಮಗೊಳಿಸುತ್ತದೆ ಎಂದಿದ್ದಾರೆ.

ಅಭಿವೃದ್ಧಿಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗದ ಕಾರಣ ಮೊದಲು ಅಭಿವೃದ್ಧಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಜನನ ಹಾಗೂ ಮರಣ ಪ್ರಮಾಣ ಪತ್ರದ ದತ್ತಾಂಶವನ್ನು ವಿಶೇಷ ರೀತಿಯಲ್ಲಿ ಸಂರಕ್ಷಿಸಿದರೆ ಜನಗಣತಿ ನಡುವಿನ ಸಮಯವನ್ನು ಅಂದಾಜಿಸಿ ಅಭಿವೃದ್ಧಿ ಕಾಮಗಾರಿಗಳ ಯೋಜನೆಯನ್ನು ಸಮರ್ಪಕವಾಗಿ ಮಾಡಬಹುದು ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ಜನಗಣತಿಯನ್ನು ವಿದ್ಯುನ್ಮಾನ ಮಾದರಿಯಲ್ಲಿ ಕೈಗೊಳ್ಳಲಾಗುವುದು, ಸ್ವಯಂ ಗಣತಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಶಾ ತಿಳಿಸಿದ್ದಾರೆ.