ಗ್ಯಾರಂಟಿ ಯೋಜನೆ ಜಾರಿಗೆ ಅಧಿಕಾರಿಗಳೊಂದಿಗೆ ಸಿಎಂ ಸಭೆ

ಬೆಂಗಳೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತೆ ಐದು ಗ್ಯಾರಂಟಿಗಳ ಯೋಜನೆಗಳನ್ನು ಜಾರಿಗೆ ತರುವ ಕುರಿತು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು.

ಬೆಂಗಳೂರಿನ ಶಕ್ತಿಸೌಧದಲ್ಲಿ ಸಿದ್ದರಾಮಯ್ಯ 5 ಇಲಾಖೆಗಳ ಅಧಿಕಾರಿಗಳೊಂದಿಗೆ ಬೆಳಗ್ಗೆ ಸಭೆ ನಡೆಸಿ 5 ಗ್ಯಾರಂಟಿ ಯೋಜನೆಗಳಿಗೆ  ಫಲಾನುಭವಿಗಳನ್ನು ಗುರುತಿಸುವ ಕುರಿತು ಮಾಹಿತಿ ಪಡೆದರು.

ಇಂಧನ ಇಲಾಖೆ, ಸಾರಿಗೆ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕೌಶಲ್ಯ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.

ಜೂನ್ 1ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು ಅಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿ ಜಾರಿ ಮಾಡಲು ಅಧಿಕೃತ ಮುದ್ರೆ ಒತ್ತುವ ಸಾಧ್ಯತೆ ಇದೆ.

ಕಾಂಗ್ರೆಸ್ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಮನೆಯ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿ ಮತ್ತು ಪದವೀಧರ ನಿರುದ್ಯೋಗಿಗಳಿಗೆ 3000 ಮತ್ತು ಡಿಪ್ಲೋಮಾ ಪದವಿದರರಿಗೆ ಎರಡು ವರ್ಷಗಳವರೆಗೆ 1,500 ರೂ,ಮನೆಯ ಯಜಮಾನಿಗೆ 2000ರೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿತ್ತು.

ಸರ್ಕಾರ ಅಧಿಕಾರಕ್ಕೆ ಬಂದು 15 ದಿನಗಳಾದರೂ ಯಾವುದೇ ಗ್ಯಾರಂಟಿ ಯೋಜನೆಗಳು ಜಾರಿಯಾಗದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಾಗಾಗಿ ಇವುಗಳನ್ನು ಜಾರಿಗೆ ತರಲು ಸಮರೋಪಾದಿಯಲ್ಲಿ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯ ದರ್ಶಿ  ಹಾಗೂ ಐದೂ ಇಲಾಖೆಗಳ ಕಾರ್ಯದರ್ಶಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.