ನವೋದಯ ಮಾದರಿ ಶಾಲೆ ಆರಂಭ -ಗುರುಗಳಿಂದ ಮಾಹಿತಿ ಪಡೆದ ಡಿಕೆಶಿ

ಬೆಂಗಳೂರು: ನಾವು ನಮ್ಮ ಪ್ರಣಾಳಿಕೆಯಲ್ಲಿ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆ ಆರಂಭಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಡಿ.ಕೆ ಶಿವಕುಮಾರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಚೇರ್ಮನ್ ಕೆ. ಪಿ ಗೋಪಾಲ್ ಕೃಷ್ಣ ಅವರನ್ನು ಸ್ಕೂಲಿನ ಕ್ಯಾಂಪಸ್ ನಲ್ಲಿ  ಭೇಟಿ ಮಾಡಿ ಮಾತನಾಡಿದರು.

ನಾನು ಓದಿದ ಶಾಲೆಗೆ ಹೋಗಿ ನಮ್ಮ ಗುರುಗಳಾದ ಗೋಪಾಲಕೃಷ್ಣ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಸಾಧನೆ ಮಾಡಿದ್ದಾರೆ. ಈ ನ್ಯಾಷನಲ್ ಪಬ್ಲಿಕ್ ಶಾಲೆ ದೇಶದಲ್ಲೇ ಮೊದಲ ಸ್ವಾಯತ್ತ ಶಾಲೆಯಾಗಿದೆ ಎಂದು ಹೇಳಿದರು.

ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆ ಯಾವ ರೀತಿ ಮಾಡಬೇಕೆಂಬ‌ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಗೋಪಾಲಕೃಷ್ಣ ಅವರ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಹಳ್ಳಿಯಿಂದ ಶಿಕ್ಷಣಕ್ಕೆ ಮಕ್ಕಳು ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸಿದ್ದೇವೆ. ನಾನು ಪರಮೇಶ್ವರ್ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಈ ಬಗ್ಗೆ ಚರ್ಚೆ ಮಾಡುತ್ತೇವೆ.

ಹಳ್ಳಿ ಜನರಿಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಹಂಬಲವಿದೆ. ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು. ಇದು ನಮ್ಮ ಸರ್ಕಾರದ ಆದ್ಯತೆ ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ ಭರವಸೆ ಜಾರಿ ಅಸಾಧ್ಯ ಎಂಬ ವಿರೋಧ ಪಕ್ಷಗಳ ನಾಯಕರು ಹೇಳಿಕೆ ನೀಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಡಿಕೆಶಿ, ಯಾವುದೇ ಊಹಾಪೋಹಗಳ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಚರ್ಚೆ ಮಾಡುವವರಿಗೆ, ಟೀಕೆ ಮಾಡುವವರಿಗೆ, ಸಲಹೆ ನೀಡುವವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಮಾತನಾಡುವವರು, ಟೀಕೆ ಮಾಡುವವರು ಮಾಡಲಿ. ನಾವು ಕೆಲಸ ಮಾಡಿ ಉತ್ತರ ನೀಡುತ್ತೇವೆ ಎಂದು ತಿರುಗೇಟು ನೀಡಿದರು.