ಬೆಂಗಳೂರು: ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆ ತಗ್ಗಿಸಲು ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ವಿರೋಧ ಪಕ್ಷದವರು ಇರುವುದೇ ಟೀಕೆ ಮಾಡಲು,ಮಾಡಿಕೊಳ್ಳಲಿ, ಟೀಕೆ ಮಾಡುವ ಮೊದಲು ಪ್ರಧಾನಮಂತ್ರಿಗಳು ಈ ಹಿಂದೆ ಹೇಳಿದಂತೆ ವಿದೇಶದಿಂದ ಕಪ್ಪು ಹಣ ತರಲಿ, ಎಲ್ಲರ ಖಾತೆಗೆ 15 ಲಕ್ಷ ಹಾಕಲಿ,ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡಲಿ,ರೈತರ ಆದಾಯ ಡಬಲ್ ಮಾಡಲಿ ಎಂದು ತಿಳಿಸಿದರು.
ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಪರೀಕ್ಷೆ ಎದುರಾಗುತ್ತಿದ್ದು, ಅದರಲ್ಲಿ ಅವರು ಪಾಸ್ ಆಗಲು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲಿ.
ಬಾಡಿಗೆ ಮನೆಯಲ್ಲಿರುವವರು ಬಡವರಲ್ಲವೇ ಅವರಿಗೂ ಈ ಯೋಜನೆಯ ಫಲ ಸಿಗಬೇಕು ಜನರು ಬಾಡಿಗೆ ಮನೆಯಲ್ಲಾದರೂ ಇರಲಿ ಸ್ವಂತ ಮನೆಯಲ್ಲಾದರೂ ಇರಲಿ ಈ ಯೋಜನೆಯ ಫಲ ಅವರಿಗೆ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಡಿಕೆಶಿ ಸ್ಪಷ್ಟಪಡಿಸಿದರು.
200 ಯೂನಿಟ್ ವರೆಗೂ ಉಚಿತ ಎಂದು ಹೇಳಿದ್ದೆವು ಅದರಂತೆ ನೀಡಿದ್ದೇವೆ. ಇಷ್ಟು ದಿನಗಳ ಕಾಲ ನೂರು ಯೂನಿಟ್ ಬಳಸುತ್ತಿದ್ದವರು. ಏಕಾಏಕಿ 200 ಯುನಿಟ್ ಬಳಸಿದರೆ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಯೋಜನೆಯ ಫಲ ತ್ಯಜಿಸಲು ಅವಕಾಶ ಇದೆಯೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಇದಕ್ಕೆ ಅವಕಾಶ ಕಲ್ಪಿಸುತ್ತೇವೆ. ಒಂದು ವೇಳೆ ಯಾರಿಗಾದರೂ ಈ ಯೋಜನೆ ಫಲ ಬೇಡವಾದರೆ ಅದನ್ನು ಅವರು ತ್ಯಜಿಸಿ ವಿದ್ಯುತ್ ಬಿಲ್ ಕಟ್ಟಬಹುದು ಎಂದು ತಿಳಿಸಿದರು.
ಅನೇಕ ಅಧಿಕಾರಿಗಳು, ಮಾಧ್ಯಮ ಮುಖ್ಯಸ್ಥರು, ಸರ್ಕಾರಿ ನೌಕರರು ಈ ಗೃಹಜೋತಿ ಯೋಜನೆಯ ಫಲ ಬೇಡ ಎಂದು ಪತ್ರ ಬರೆದರೆ, ಮತ್ತೆ ಕೆಲವರು ಖುದ್ದಾಗಿ ಹೇಳಿದ್ದಾರೆ. ಯಾರಿಗೆಲ್ಲ ಈ ಯೋಜನೆಯ ಲಾಭ ಬೇಡವೋ ಅವರಿಗೆ ಇದನ್ನು ತ್ಯಜಿಸಲು ಅವಕಾಶ ನೀಡಲಾಗುವುದು.
ಅದಕ್ಕಾಗಿ ಈ ಯೋಜನೆಗಳ ಫಲ ಪಡೆಯಲು ಅರ್ಜಿಯನ್ನು ಕರೆಯಲಾಗಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿ ತ್ಯಜಿಸಲು ಕರೆ ಕೊಟ್ಟಾಗ ಅನೇಕರು ಅದಕ್ಕೆ ಸ್ಪಂದಿಸಿ ಸಬ್ಸಿಡಿಯನ್ನು ಕೈಬಿಟ್ಟಿದ್ದರು. ಅದೇ ರೀತಿ ಇಲ್ಲಿಯೂ ಯೋಜನೆ ಲಾಭ ತ್ಯಜಿಸಬಹುದು ಎಂದು ತಿಳಿಸಿದರು.
ಕಾಂಗ್ರೆಸ್ ನವರು ಹಣೆಗೆ ತುಪ್ಪ ಸವರುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಟೀಕೆ ಕುರಿತಾದ ಪ್ರಶ್ನೆಗೆ, ಕುಮಾರಣ್ಣ ದೊಡ್ಡವರು ಅವರಿಗೆ ಬಹಳ ಅನುಭವವಿದೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ನನ್ನ ಕರ್ತವ್ಯ ಮಾಡುತ್ತೇನೆ ಅವರು ಅವರ ಕೆಲಸ ಮಾಡಲಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

