ಒಡಿಶಾ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು,ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ.
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಡೆದ ರೈಲ್ವೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿದೆ. ಇನ್ನೂ 650 ಗಾಯಗೊಂಡ ಪ್ರಯಾಣಿಕರು ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್‌ಇಆರ್ ರೈಲ್ವೆ ವಕ್ತಾರ ಆದಿತ್ಯ ಚೌಧರಿ ಹೇಳಿದ್ದಾರೆ.
ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ (ಸಿಆರ್‌ಎಸ್) ಆಯುಕ್ತರು ಅಪಘಾತದ ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದೇಶದಲ್ಲೇ ಅತ್ಯಂತ ಭೀಕರ ರೈಲು ಅಪಘಾತ ಇದಾಗಿದ್ದು,ರೈಲ್ವೆ ಸಚಿವಾಲಯ ಈಗಾಗಲೇ ಘಟನೆಯ ತನಿಖೆಗೆ ಆದೇಶಿಸಿದೆ.
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತದಲ್ಲಿ ಸಿಲುಕಿ ಹಲವಾರು ಬೋಗಿಗಳು ಪೂರ್ಣ ನಾಶವಾಗಿವೆ.

