ಬೆಂಗಳೂರು: ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಭಾರೀ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಅಕ್ಕಿ ಬೇಯಿಸುವ ಮೂಲಕ ವಿಶಿಷ್ಟ ವಾಗಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಆಹಾರ ಭಧ್ರತೆ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್. ನಾವು ಹೇಳಿದಂತೆ 10 ಕೆಜಿ ಅಕ್ಕಿ ಕೊಟ್ಟು ಮಾತು ಉಳಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾಗಿ ಹೇಳಿತ್ತು. ಈಗ ಕೊಡಲು ಸಾಧ್ಯವಿಲ್ಲ ಅನ್ನುತ್ತಿದ್ದಾರೆ. ಕೇಂದ್ರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದ್ದೇವೆ.
ಶಕ್ತಿ ಯೋಜನೆಯಡಿ 3ಕೋಟಿ ಜನ ಪ್ರಯಾಣ ಮಾಡಿದ್ದಾರೆ.
ವಿಪಕ್ಷ ನಾಯಕರಿಗೆ ಟೀಕೆ ಮಾಡಬೇಡಿ ಎಂದು ಹೇಳುವುದಿಲ್ಲ ನಾವು ತಪ್ಪು ಮಾಡಿದರೆ ವಿಪಕ್ಷದವರು ತಿದ್ದಲಿ ಎಂದು ತಿಳಿಸಿದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದು ಆಹಾರವನ್ನು ಪ್ರತಿಯೊಬ್ಬರ ಹಕ್ಕನ್ನಾಗಿ ಮಾಡಲಾಯಿತು.
ನಮ್ಮ ಪಕ್ಷ ನೀಡಿದ್ದ ಪ್ರತಿಯೊಂದು ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ,ಮಳೆಯನ್ನೂ ಲೆಕ್ಕುಸದೆ ನೂರಾರು ಮಂದಿ ನಮ್ಮೊಂದಿಗೆ ಪ್ರತಿಭಟನೆಗೆ ಕೈಜೋಡಿಸಿದ್ದಾರೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಡಿಕೆಶಿ ತಿಳಿಸಿದರು.
ಅಧಿಕಾರ ಸಿಗದೆ ಹತಾಶೆಯಲ್ಲಿರುವ ಬಿಜೆಪಿ ಸರ್ಕಾರ ನ್ಯಾಯಯುತವಾಗಿ ನಮಗೆ ಸಲ್ಲಬೇಕಾದ ಅಕ್ಕಿ ನೀಡದೆ ರಾಜ್ಯ ಸರ್ಕಾರದ ಹಕ್ಕನ್ನು ಕಸಿಯುತ್ತಿದೆ.
ಹೊಟ್ಟೆ ತುಂಬಿದ ಬಿಜೆಪಿ ಸರ್ಕಾರಕ್ಕೆ ಬಡವರ ಹಸಿವು ಅರ್ಥವಾಗುತ್ತಿಲ್ಲ. ಕನ್ನಡಿಗರ ಆಕ್ರೋಶವನ್ನು ದಿಲ್ಲಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ಇಂದು ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ ಎಂದು ಹೇಳಿದರು

