ಕೆ.ಆರ್.ಆಸ್ಪತ್ರೆ, ಬಾಲಕ, ಬಾಲಕಿಯರ ಮಂದಿರಗಳ ಕರ್ಮಕಾಂಡ ಬಯಲಿಗೆಳೆದ ಫಣೀಂದ್ರ

ಮೈಸೂರು: ಮೈಸೂರಿನ  ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ ಹಾಗೂ ಬಾಲಕ,ಬಾಲಕಿಯರ ಮಂದಿರಗಳ ಕರ್ಮಕಾಂಡವನ್ನ ಸ್ವತಃ ಉಪಲೋಕಾಯುಕ್ತ ಕೆ.ಆರ್.ಫಣೀಂದ್ರ ರವರು ಬಯಲುಮಾಡಿದ್ದಾರೆ.

ಜತೆಗೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಕಚೇರಿಯ ಕಾನೂನು ಸಲಹೆ ವಿಭಾಗಕ್ಕೆ ಆದೇಶಿಸಿದ್ದಾರೆ.

ನಿಗದಿತ ಅವಧಿಯಲ್ಲಿ ಅಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಜೂನ್ 17 ರಂದು ಫಣೀಂದ್ರ ಅವರು ಮೈಸೂರಿಗೆ ಮೂರು ದಿನಗಳ ಭೇಟಿ ನೀಡಿದ್ದರು.ಈ ವೇಳೆ  ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕಿಯರ ಮಂದಿರ ಹಾಗೂ ಬಾಲಕರ ಮಂದಿರಕ್ಕೂ ಧಿಢೀರ್ ಭೇಟಿ ನೀಡಿದ್ದರು.

ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟಗಳನ್ನ ಕಣ್ಣಾರೆ ಕಂಡಿದ್ದರು.ಔಷಧಿಗಳ ಕೊರತೆ,ಸಿಬ್ಬಂದಿಗಳ ದುರ್ವರ್ತನೆ,ಅವ್ಯವಸ್ಥೆಗಳನ್ನ  ಪಟ್ಟಿಮಾಡಿದ್ದರು.

ಬಾಲಕ ಹಾಗೂ ಬಾಲಕಿಯರ ಮಂದಿರದಲ್ಲೂ ಸಹ ಇಂತಹ ದೃಶ್ಯಗಳೇ ಕಂಡು ಬಂದಿತ್ತು.ಗುಣಮಟ್ಟದ ಆಹಾರ ಮತ್ತು ಬಟ್ಟೆ ನೀಡದಿರುವುದು. ಹುಳಮಿಶ್ರಿತ ಪದಾರ್ಥಗಳನ್ನ ಬಳಸುತ್ತಿರುವುದು ಸೇರಿದಂತೆ ಹಲವಾರು ಅಂಶಗಳು ಉಪಲೋಕಾಯುಕ್ತರ ಕಣ್ಣಿಗೆ ರಾಚಿದ್ದವು.

ಈ ಎಲ್ಲಾ ಕರ್ಮಕಾಂಡಗಳನ್ನ ಪಟ್ಟಿ ಮಾಡಿದ ಉಪಲೋಕಾಯುಕ್ತರು ಪ್ರಧಾನ ಕಚೇರಿಗೆ ಪತ್ರ ಬರೆದು ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.