ಮೈಸೂರು: ಮೈಸೂರು ದಸರಾ 2023 ರಲ್ಲಿ ವಿವಿಧ ಕಂಪನಿಗಳು, ಉದ್ಯಮಿಗಳು ಪ್ರಾಯೋಜಕತ್ವ ವಹಿಸಿ ಸ್ಪಾನ್ಸರ್ ನೀಡಲು ಅವಕಾಶವಿದ್ದು, ನಮ್ಮೊಂದಿಗೆ ಕೈಜೋಡಿಸಿ ದಸರಾ ಆಚರಣೆ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ ಮಾಡಿದರು.
ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ದಸರಾ ಪ್ರಾಯೋಜಕತ್ವ ಕುರಿತ ಸಭೆಯಲ್ಲಿ ಮಾತನಾಡಿದ ಡಿಸಿ,ಉದ್ಯಮಿಗಳು ಪ್ರಾಯೋಜಕತ್ವ ವಹಿಸು
ವುದರೊಂದಿಗೆ ತಮ್ಮ ವ್ಯಾಪಾರ ವಹಿವಾಟು ಅಭಿವೃದ್ಧಿ ಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಬಾರಿ ಸರಳವೂ ಅಲ್ಲದ ಆಡಂಬರವೂ ಇಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದೆ. ವಿವಿಧ ರೀತಿಯ ಪ್ರಾಯೋಜಕತ್ವಗಳು ಇದೆ.
ಟೈಟಲ್ ಸ್ಪಾನ್ಸರ್ 3 ಕೋಟಿ, ಪ್ಲಾಟಿನಂ ಸ್ಪಾನ್ಸರ್ 1 ಕೋಟಿ, ಗೋಲ್ಡ್ ಸ್ಪಾನ್ಸರ್ 50 ಲಕ್ಷ , ಸಿಲ್ವರ್ ಸ್ಪಾನ್ಸರ್ 25 ಲಕ್ಷ, ಅಸೋಸಿಯೇಟ್ ಮತ್ತು ಇವೆಂಟ್ ಸ್ಪಾನ್ಸರ್ 3 ಲಕ್ಷ ಇರುತ್ತದೆ.
ಸ್ಪಾನ್ಸರ್ ಮಾಡುವವರಿಗೆ ದಸರಾ ಕಾರ್ಯಕ್ರಮಗಳಲ್ಲಿ ತಮ್ಮ ಕಂಪನಿಯ ಜಾಹೀರಾತುಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ತಾವು ಪೂರ್ಣ ಒಂದು ಈವೆಂಟ್ ಅಥವಾ ಒಂದು ದಿನ,ಒಂದು ಕಾರ್ಯಕ್ರಮ ಯಾವ ರೀತಿಯಾದರೂ ಪ್ರಾಯೋಜಕತ್ವ ನೀಡಬಹುದಾಗಿದೆ, ದಸರಾ ಹೋರ್ಡಿಂಗ್ಸ್,ಬ್ಯಾನರ್ಸ್ ಮತ್ತು ಕಾರ್ಯಕ್ರಮ ನಿರೂಪಕರಿಂದ ನಿಮ್ಮ ಉತ್ಪನ್ನಗಳ ಹೆಸರುಗಳನ್ನು ಹೇಳಿಸುವ ಮೂಲಕ ಬ್ರಾಂಡ್ ಮಾಡಬಹುದಾಗಿದೆ ಇದರಿಂದ ನೀವು ಬೆಳೆಯುವುದರೊಂದಿಗೆ ನಿಮ್ಮ ಉದ್ಯಮಗಳ ಬೆಳವಣಿಗೆ ಆಗಲಿದೆ ಎಂದು ತಿಳಿಸಿದರು.
ರೈತ ದಸರಾಗೆ ರಸಗೊಬ್ಬರ ಕಂಪನಿಗಳು, ಟ್ರಾಕ್ಟರ್ ಹಾಗೂ ಕೃಷಿ ಉಪಕರಣಗಳ ಕಂಪನಿ ಅವರು ಪ್ರಾಯೋಜಕತ್ವ ವಹಿಸಿಕೊಳ್ಳಬಹುದಾಗಿದೆ. ಇದೇ ರೀತಿ ಉಳಿದ ಉದ್ಯಮಿಗಳು ತಮಗೆ ಅನುಕೂಲವಾಗುವ ಕಾರ್ಯಕ್ರಮ ಗಳಿಗೆ ಪ್ರಾಯೋಜಕತ್ವ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮೂಡಾ ಆಯುಕ್ತ ದಿನೇಶ್, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ರೂಪಶ್ರೀ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಸೇರಿದಂತೆ ವಿವಿಧ ಕಂಪನಿಗಳು,ಬ್ಯಾಂಕಿಂಗ್, ಹೋಟೆಲ್ ಉದ್ಯಮಿಗಳು ಉಪಸ್ಥಿತರಿದ್ದರು.

