ಮೈಸೂರು: ಶಿಲ್ಪಿಗಳಿಗೂ ವಿಜ್ಞಾನಕ್ಕೂ ಸಂಬಂಧವಿರುವುದಿಲ್ಲ ಎಂದು ನಾವು ಭಾವಿಸುತ್ತೇವೆ ಆದರೆ ಶಿಲ್ಪಿಗಳಿಗಿಂತ ದೊಡ್ಡ ವಿಜ್ಞಾನಿಗಳಿಲ್ಲ ಎಂದು ದಸರಾ ವಿಶೇಷ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ತಿಳಿಸಿದರು.
ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2023ರ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಹಾಗೂ ಬೆಂಗಳೂರಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಸುಂದರ ಶಿಲ್ಪ ಕಲೆಯು ಕಲೆಗಾರನ ಕಲಾಚಾತುರ್ಯ, ಶ್ರಮ, ಏಕಾಗ್ರತೆಯನ್ನು ಪ್ರತಿಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಶಿಲ್ಪಿಗಳ ಕೈಚಳಕ ಶ್ಲಾಘನೀಯ.
ನೂರು ವರ್ಷಗಳ ಹಿಂದಿನ ಕಟ್ಟಡ ಬಾಗಿಲು ಹಾಗೂ ಕಿಟಕಿಗಳು ಅಂದಿನ ಕಾಲದ ಶಿಲ್ಪಗಳ ಕಲಾ ವೈಭವ ವಾಸ್ತುಶಿಲ್ಪದ ಮಹತ್ವವನ್ನು ಇಂದಿಗೂ ನಮ್ಮ ಮೈಸೂರಿನಲ್ಲಿರುವ ಕೆಲವು ಕಚೇರಿಗಳು ಕಟ್ಟಡಗಳು ನಮಗೆ ಪರಿಚಯಿಸುತ್ತವೆ ಎಂದು ತಿಳಿಸಿದರು.
ಈ ಹತ್ತು ದಿನಗಳ ಶಿಬಿರದಲ್ಲಿ ತಯಾರಾದ ಶಿಲ್ಪಗಳನ್ನು ದಸರಾ ಪ್ರದರ್ಶನಕ್ಕಿಡಲಾಗುವುದು. ಮುಂದಿನ ದಿನಗಳಲ್ಲಿ ಈ ಶಿಲ್ಪಗಳನ್ನು ವಿವಿಧ ಕಚೇರಿಗಳಲ್ಲಿ ಪ್ರದರ್ಶನಕಿಟ್ಟು ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ಮಾತನಾಡಿ,ಮಂದಸ್ಮಿತ ಮುಖ, ದೈವಿಕ ಕಳೆ ಇವುಗಳನ್ನು ತುಂಬುವುದು ಸಹ ಉಳಿಪೆಟ್ಟಿನಿಂದ. ಕಲೆಗೆ ಬೆಲೆ ಕಟ್ಟಲಾಗುವುದಿಲ್ಲ, ಬದಲಾಗಿ ಕಲೆಯನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು ಎಂದು ಸಲಹೆ ನೀಡಿದರು.

