ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು,ಪ್ರಮುಖ ಆಕರ್ಷಣೆ ಯಾದ ಗಜಪಡೆಗೆ ಪ್ರತೀದಿನ ಒಂದಲ್ಲಾ ಒಂದು ತಾಲೀಮು ನಡೆಸಲಾಗುತ್ತಿದೆ.
ಬುಧವಾರ ಗಜಪಡೆಗೆ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು.
ವಸ್ತುಪ್ರದರ್ಶನ ಮೈದಾನದ ವಾಹನ ನಿಲುಗಡೆ ಜಾಗದಲ್ಲಿ ತಾಲೀಮು ನಡೆಯಿತು.
ಏಳು ಫಿರಂಗಿ ಗಾಡಿಗಳಿಂದ ಸಿಆರ್ ಸಿಬ್ಬಂದಿ ಕುಶಾಲತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21ಕುಶಾಲತೋಪು ಸಿಡಿಸಿ ತಾಲೀಮು ನಡೆಸಿದರು.
ದಸರಾ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ಈ ಫಿರಂಗಿ ಸಿಡಿಸುವ ಕಾರ್ಯಕ್ರಮ ನಡೆಯಲಿದ್ದು, ಆನೆಗಳು, ಕುದುರೆಗಳು ಬೆದರದೆ ಸುಗಮವಾಗಿ ಸಾಗಲಿ, ಅವುಗಳಿಗೆ ಸಿಡಿಮದ್ದಿನ ಶಬ್ದ ಅಭ್ಯಾಸವಾಗಲಿ ಎಂಬ ದೃಷ್ಟಿಯಿಂದ ತಾಲೀಮು ನಡೆಸಲಾಗುತ್ತಿದೆ.
ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಇದೆಲ್ಲದಕ್ಕೂ ನೀಟಾಗಿ ಒಗ್ಗಿಕೊಳ್ಳುತ್ತಿವೆ.

