ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಅಕ್ಟೋಬರ್ 23 ರಂದು ಏರ್ ಶೋ ಮತ್ತು ಅಕ್ಟೋಬರ್ 18 ರಿಂದ ಯುವ ದಸರಾ ನಡೆಯಲಿದೆ.
ದಸರಾ ಸಿದ್ದತೆ ಕುರಿತು ಅರಮನೆ ಮಂಡಳಿ ಕಚೇರಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಐದು ವರ್ಷಗಳ ಬಳಿಕ ದಸರಾ ಮಹೋತ್ಸವದಲ್ಲಿ ಏರ್ ಶೋ ಆಯೋಜಿಸಲಾಗಿದೆ, ಅಕ್ಟೋಬರ್ 22 ಮತ್ತು 23 ರಂದು ನಡೆಯಲಿದೆ, ಅಕ್ಟೋಬರ್ 22ರಂದು ಏರ್ ಶೋ ರಿಹರ್ಸಲ್, ಅಕ್ಟೋಬರ್ 23ರಂದು ಪೂರ್ಣಪ್ರಮಾಣದ ಏರ್ ಶೋ ಆಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.
ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸಂಜೆ 4 ಗಂಟೆಗೆ ಏರ್ ಶೋ ಆರಂಭವಾಗಲಿದ್ದು, ಒಟ್ಟು 45 ನಿಮಿಷ ಏರ್ ಶೋ ನಡೆಯಲಿದೆ ಎಂದು ತಿಳಿಸಿದರು.
ಈ ಬಾರಿ ಬರದ ಪರಿಣಾಮ ಸರ್ಕಾರದ ಮಾರ್ಗಸೂಚಿಯನ್ವಯ ಸಾಂಪ್ರದಾಯಿಕ ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಸಿದ್ದತೆ ಮಾಡಲಾಗುತ್ತಿದೆ, ದಸರಾಗೆ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಹೊರ ರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿಗರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಚಿಂತನೆಯಿದೆ ಎಂದು ಡಿಸಿ ರಾಜೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಸೀಮಾ ಲಾಟ್ಕರ್, ಅಕ್ಟೋಬರ್ 18 ರಿಂದ 21ರವರೆಗೆ ಯುವ ದಸರಾ ಆಯೋಜನೆ ಮಾಡಲಾಗಿದ್ದು ಉದ್ಘಾಟನೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ. ಕನ್ನಡ ಹಿನ್ನೆಲೆ ಗಾಯಕ ಸಂಚಿತ್ ಹೆಗ್ಡೆ ಮತ್ತು ತಂಡ ಯುವ ದಸರಾದಲ್ಲಿ ಪಾಲ್ಗೊಳ್ಳಲಲಿದೆ ಎಂದು ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಸಂಭ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಸಂಜೆ 6.30 ರಿಂದ ರಾತ್ರಿ 10.30 ರವರಿಗೆ ಯುವ ದಸರಾ ನಡೆಯಲಿದೆ ಎಂದು ಹೇಳಿದರು.
ಮೊದಲ ದಿನ ಸಾಧು ಕೋಕಿಲ ಮತ್ತು ತಂಡದಿಂದ ಸಂಗೀತದ ಸಂಜೆ, ಕನ್ನಡದಾಲ್ ಒಕೆ ತಂಡದಿಂದ ಸಂಗೀತ ಕಾರ್ಯಕ್ರಮ, ಬಾಲಿವುಡ್ ಹಾಡುಗಾರರು ಕೂಡ ಈ ಬಾರಿ ಯುವ ದಸರಾದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಸ್ಥಳೀಯ ಪ್ರತಿಭೆಗಳಿಗೂ ಯುವ ದಸರಾ ಸಂಭ್ರಮದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.

