ದಸರಾ ವೀಕ್ಷಣೆ: ಬುಕಿಂಗ್ ಪ್ರಾರಂಭವಾದ ಇಪ್ಪತ್ತೇ ನಿಮಿಷದಲ್ಲಿ ಟಿಕೆಟ್ ಸೋಲ್ಡ್ ಔಟ್ !

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಐತಿಹಾಸಿಕ ಜಂಬೂಸವಾರಿ ಮತ್ತು ಪಂಜಿನ ಕವಾಯತು ವೀಕ್ಷಣೆಗೆ ಲಕ್ಷಾಂತರ ಜನರು‌ ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ,ಆದರೆ ಟಿಕೆಟ್ ಗಳೇ ಲಭ್ಯವಿಲ್ಲದಂತಾಗಿದೆ.

ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಪ್ರಾರಂಭವಾದ ಕೆಲವೇ ಹೊತ್ತಿನಲ್ಲಿ ಸೋಲ್ಡ್ ಔಟ್ ತೋರಿಸುತ್ತಿದೆ.

ಹತ್ತು ಗಂಟೆಗೆ ಟಿಕೆಟ್ ಬುಕಿಂಗ್ ಪ್ರಾರಂಭವಾಗಬೇಕಿತ್ತು,ಆದರೆ 11 ಗಂಟೆ  ಪ್ರಾರಂಭವಾಯಿತು.ಕೇವಲ ಇಪ್ಪತ್ತು ನಿಮಿಷಕ್ಕೆಲ್ಲಾ ಸೋಲ್ಡ್ ಔಟ್ ಎಂದು ಮೆಸೇಜ್ ಬರುತ್ತಿದೆ.

ಕೇವಲ ಇಪ್ಪತ್ತು ನಿಮಿಷಕ್ಕೆಲ್ಲಾ ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳು ಕಾಲಿಯಾಗಿಬಿಟ್ಟಿವೆ.ಇದರಿಂದಾಗಿ ಬಹಳಷ್ಟು ಜನ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಗಳನ್ನು ಆನ್ ಲೈನ್ ಮೂಲಕ https://mysoredasara.gov.in ವೆಬ್ ಸೈಟ್ ನಲ್ಲಿ ಖರೀದಿ ಮಾಡಬಹುದಾಗಿತ್ತು.

10 ಗಂಟೆ ಬದಲು 11 ಗಂಟೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆ ಮಾಡಿದ ಕೇವಲ 20 ನಿಮಿಷಗಳಲ್ಲೇ ಎಲ್ಲಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಗಳು ಖರೀದಿಯಾಗಿವೆ.

ಜಂಬೂಸವಾರಿ ವೀಕ್ಷಣೆ ಗೋಲ್ಡ್ ಕಾರ್ಡ್ ಗೆ   6,000 ರೂ., ಅರಮನೆ A. 3,000 ರೂ,, ಅರಮನೆ B  2,000 ರೂ, ಪಂಜಿನ ಕವಾಯತು ವೀಕ್ಷಣೆಗೆ- 500 ರೂ ಹಣ ನಿಗದಿ ಮಾಡಲಾಗಿತ್ತು.

ಹಣ ದುಬಾರಿಯಾದರೂ ಸಹ ಕೇವಲ 20 ನಿಮಿಷದಲ್ಲಿ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿರುವುದು ಅಚ್ಚರಿ ಮೂಡಿಸಿದೆ.

ಹಣ ಎಷ್ಟೇ ದುಬಾರಿಯಾದರೂ ಸಹ ದಸರಾ ಜಂಬೂ ಸವಾರಿ ನೋಡಲು ಜನರಿಗೆ ಸಂಭ್ರಮ,  ಕುತೂಹಲವಂತೂ ಕಡಿಮೆಯಾಗುವುದಿಲ್ಲ,ಅದೇನೋ ಸರೀ.ಆದರೆ ಇಪ್ಪತ್ತು ನಿಮಿಷಕ್ಕೆ ಟಿಕೆಟ್ ಸೋಲ್ಡ್ ಔಟ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಪ್ರತಿವರ್ಷ ದಸರಾ ಜಂಬೂ ಸವಾರಿ ವೀಕ್ಷಣೆಗೆ ರಾಜ್ಯ, ದೇಶದ ಬೇರೆ ಬೇರೆ ಭಾಗಗಳಿಂದ ಅಷ್ಟೇ ಏಕೆ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.

ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅಭಿಮನ್ಯು ಮತ್ತು ದಸರಾ ಗಜಪಡೆ ಹಾಗೂ ಸ್ತಬ್ದಚಿತ್ರಗಳು ಕಲಾತಂಡಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾಯುತ್ತಾರೆ.

ಆದರೆ ಈ ರೀತಿ ಟಿಕೆಟ್, ಗೋಲ್ಡ್ ಕಾರ್ಡ್ ಬಿಕರಿಯಾಗಿಬಿಟ್ಟರೆ ಉಳಿದವರ ಪಾಡೇನು ಎಂಬುದೇ ಈಗ ಪ್ರಶ್ನೆಯಾಗಿದೆ.