ಮೈಸೂರು: ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಪೂರೈಸುವುದು ನನ್ನ ಜವಾಬ್ದಾರಿ, ರಾಜ್ಯ ಸರ್ಕಾರ ಆ ಕರ್ತವ್ಯವನ್ನು ನನಗೆ ವಹಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಬುಧವಾರ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಆದರೆ ಅವಕಾಶದ ಕೊರತೆ ಇರುವುದರಿಂದ ಕೆಲವೊಮ್ಮೆ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲಾಗುವುದಿಲ್ಲ.
ಮಕ್ಕಳ ಅಭಿವೃದ್ಧಿಗೆ ಬೇಕಾದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಕ್ಕಳ ವಸ್ತು ಪ್ರದರ್ಶನವನ್ನು ಗಮನಿಸಿದೆ, ಅತ್ಯಂತ ಆಕರ್ಷಣೆಯಾಗಿದೆ, ವಸ್ತು ಪ್ರದರ್ಶನದಲ್ಲಿ ಮಕ್ಕಳ ಪ್ರತಿಭೆ ಎದ್ದು ತೋರುತ್ತದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಗೈದ ಪ್ರತಿಭಾವಂತ ಮಕ್ಕಳ ಜೊತೆಯಲ್ಲಿ ಕುಳಿತಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಮಾತನಾಡಿ, ಮಕ್ಕಳ ದಸರಾ ಭಾಷಣ ಮಾಡುವುದಕ್ಕಲ್ಲ. ಮಕ್ಕಳ ಪ್ರತಿಭೆ, ಅವರು ಸಂತಸ ಅನುಭವಿಸುವುದನ್ನು ಕಣ್ಣಾರೆ ನೋಡುವುದಕ್ಕಾಗಿ,ಈ ಪ್ರತಿಭಾನ್ವಿತ ಮಕ್ಕಳನ್ನು ನೋಡಿ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿಕೊಳ್ಳಿ ಎಂದು ಇತರೆ ಮಕ್ಕಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ವಿಧಾನಸಭಾ ಶಾಸಕ ಹರೀಶ್ ಗೌಡ ಎಲ್ಲ ಮಕ್ಕಳಿಗೂ ದಸರಾ ಹಬ್ಬದ ಶುಭ ಹಾರೈಸಿದರು.
ಸರಿಗಮಪ ಸೀಸನ್ 19ರ ದಿಯಾ ಹೆಗಡೆ, ಪ್ರಗತಿ ಬಡಿಗೇರ್, ರಾಜ್ಯಮಟ್ಟದ ಸೋಲೊ ಡಾನ್ಸ್ ವಿಜೇತ ಗಂಗಾಧರ್ ಜಿ.ಎಂ ಹಾಗೂ ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಬಾಲ ಪ್ರತಿಭೆಗಳಿಗೆ ಸಚಿವರುಗಳು ಗೌರವ ಸಮರ್ಪಣೆ ಮಾಡಿ, ಚೆಕ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಮೇಯರ್ ಶಿವಕುಮಾರ್, ಉಪ ಮೇಯರ್ ಡಾ. ರೂಪ.ಜಿ, ಕಾರ್ಪೋರೇಟರ್ ಪರಿಮಳ ಭರತ್,ದಸರಾ ಉಪ ಸಮಿತಿಯ ರುಚಿ ಬಿಂದಾಲ್, ಸುಧಾ ಮಹದೇವಯ್ಯ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಭಾಗವಹಿಸಿದ್ದರು.

