ಮೈಸೂರು:ಪಾರಂಪರಿಕ ನಗರಿ ಮೈಸೂರಿನ ಕಟ್ಟಡಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ ಹಾಗಾಗಿ ಇವುಗಳ ಇತಿಹಾಸ ತಿಳಿದು ಕಟ್ಟಡಗಳನ್ನು ಉಳಿಸಿಕೊಂಡು ಇತಿಹಾಸ ಸೃಷ್ಟಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.

ನಗರದ ಟೌನ್ ಹಾಲ್ ಆವರಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಟ್ರಿನ್ ಟ್ರಿನ್ ಸೈಕಲ್ ಸವಾರಿ ಕಾರ್ಯಕ್ರಮವನ್ನು ಸೈಕಲ್ ಸವಾರಿ ಮಾಡುವ ಮೂಲಕ ಉದ್ಘಾಟಿಸಿದರು.
ಪಾರಂಪರಿಕ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಹೆಚ್ಚು ಯುವತಿಯರು ಆಗಮಿಸಿರುವುದು ನಜಕ್ಕೂ ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿರುವ ಅನೇಕ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಮೈಸೂರು ನಗರದ ಪಾರಂಪರಿಕ ಕಟ್ಟಡಗಳು ತನ್ನದೇ ಆದ ಇತಿಹಾಸವನ್ನು ಹೊಂದಿವೆ ವಿಶಿಷ್ಟವಾದ ಆರ್ಕಿಟೆಕ್ಚರ್ ಗಳಿಂದ ನಿರ್ಮಾಣವಾದ ಈ ಈ ಕಟ್ಟಡಗಳು ಮೈಸೂರಿನ ಭವ್ಯ ಇತಿಹಾಸವನ್ನು ತಿಳಿಸುತ್ತವೆ ಎಂದು ಸಚಿವರು ಹೇಳಿದರು.
ದೇಶದಲ್ಲಿ ಪ್ರಥಮ ಬಾರಿಗೆ ನಮ್ಮ ಸರ್ಕಾರ ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವಂತಹ ಕಾರ್ಯವನ್ನು ನಡೆಸುತ್ತಿದೆ ಇದರಿಂದ ಭಾರತದ ಸಂವಿಧಾನದ ಇತಿಹಾಸ ಮತ್ತು ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತದೆ.
ಪಾರಂಪರಿಕ ಕಟ್ಟಡ ನಿರ್ವಹಣೆ ಕಾರ್ಯ ಸರಿಯಾದ ರೀತಿಯಲ್ಲಿ ನಡೆದರೆ ಮಾತ್ರ ಅವುಗಳು ಹೆಚ್ಚು ಕಾಲ ಬಾಳಿಕೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನನ್ನ ಹುಟ್ಟೂರು ಹದಿನಾರು ಗ್ರಾಮ ಮೈಸೂರಿನ ಇತಿಹಾಸದ ಹಳ್ಳಿಗಳಲ್ಲಿ ಒಂದಾಗಿದೆ ಅಲ್ಲಿಯೂ ಕೂಡ ಅನೇಕ ಮಣ್ಣಿನಿಂದ ಮಾಡಲ್ಪಟ್ಟ ಕಟ್ಟಡಗಳಿವೆ ಈಗಲೂ ಕೂಡ ಉತ್ತಮವಾದ ಸ್ಥಿತಿಯಲ್ಲಿವೆ.
ಸಿಮೆಂಟ್ ಕಬ್ಬಿಣ ಇಲ್ಲದೆ ನಿರ್ಮಾಣವಾಗಿರುವ ಅನೇಕ ಕಟ್ಟಡಗಳನ್ನು ನಾವು ಮೈಸೂರಿನಲ್ಲಿ ಗಮನಿಸಬಹುದಾಗಿದೆ ಈಗಿನ ಆಧುನಿಕ ತಂತ್ರಜ್ಞಾನಗಳಿಲ್ಲದೆ ಆಗಿನ ಕಾಲದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಹಂಪಿ, ಸೋಮನಾಥಪುರ ಇಲ್ಲಿನ ಶಿಲ್ಪಕಲಾ ವೈಭವವು ಕರ್ನಾಟಕದ ಪಾರಂಪರಿಕ ಸಂಪತ್ತನ್ನು ತೋರಿಸುತ್ತದೆ. ಸೈಕಲ್ ಮೂಲಕ ಪಾರಂಪರಿಕ ಕಟ್ಟಡಗಳ ಬಗ್ಗೆ ತಿಳಿದುಕೊಳ್ಳಲು ಆಯೋಜಿಸಿರುವ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದು ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್ ಮಾತನಾಡಿ ಮೈಸೂರು ಸಾಂಸ್ಕೃತಿಕ ನಗರಿ ಅರಮನೆಗಳ ನಗರಿ ಯೋಗ ನಗರಿ ಸ್ವಚ್ಛ ನಗರಿ ಇವುಗಳ ಜೊತೆಗೆ ಪಾರಂಪರಿಕ ನಗರಿ ಎಂದು ವಿಶ್ವದಲ್ಲೇ ಖ್ಯಾತಿಯಾಗಿದೆ. ಹಾಗಾಗಿ ಈ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಂಡು ಹೋಗುವಂತಹ ಜವಾಬ್ದಾರಿ ಮೈಸೂರಿಗರಿಗೆ ಇದೆ.
ಐತಿಹಾಸಿಕ ಕಟ್ಟಡಗಳ ದುಸ್ಥಿತಿ ಬಗ್ಗೆ ಈಗಾಗಲೇ ಸಮೀಕ್ಷೆ ನಡೆದಿದ್ದು ಇದಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಇತಿಹಾಸ ಹಾಗೂ ಪುರಾತತ್ವ ತಜ್ಞರಾದ ನಿವೃತ್ತ ಪ್ರೊಫೆಸರ್ ಡಾ. ಏನ್.ಎಸ್ ರಂಗರಾಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರತತ್ವ ಅಧ್ಯಾಯನ ವಿಭಾಗದ ಮುಖ್ಯಸ್ಥರಾದ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ಪುರತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಮತ್ತಿತರರು ಹಾಜರಿದ್ದರು.

