ಜಗತ್ತು ಮೈಸೂರಿನತ್ತ ನೋಡಲು ಮೈಸೂರು ಮಹಾರಾಜರು ಕಾರಣ -ಸಚಿವ ಹೆಚ್. ಕೆ ಪಾಟೀಲ್

ಮೈಸೂರು: ವಿಜಯನಗರ ಸಾಮ್ರಾಜ್ಯ ಆಚರಿಸಿಕೊಂಡು ಬಂದಿದ್ದ ದಸರಾ ಪದ್ದತಿಯನ್ನು ಮೈಸೂರಿನ ಮಹಾರಾಜರು ಮುಂದುವರೆಸಿಕೊಂಡು ಬರುವ ಮೂಲಕ ಈಡೀ ಜಗತ್ತು ಮೈಸೂರಿನತ್ತ ನೋಡುವಂತೆ ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಹೆಚ್. ಕೆ ಪಾಟೀಲ್ ತಿಳಿಸಿದರು.

ಇದಕ್ಕೆ ಮೈಸೂರು ಮಹಾರಾಜರಿಗೆ ನಾಡಿನ ಬಗ್ಗೆ ಇದ್ದ ಅಭಿಮಾನವೇ ಕಾರಣ ಅವರು ಹೇಳಿದರು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪಾರಂಪರಿಕ ಉಡುಗೆಯಲ್ಲಿ ನೂತನ ದಂಪತಿಗಳಿಗಾಗಿ ಆಯೋಜಿಸಿದ್ದ ಪಾರಂಪರಿಕ ಟಾಂಗಸವಾರಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಸಚಿವರು ಮಾತನಾಡಿದರು.

ಕನ್ನಡ ನಾಡಿಗೆ ಹಬ್ಬವಾಗಿರುವ ದಸರಾ ಮೈಸೂರಿಗಾಗಲಿ, ನಾಡಿಗಾಗಲಿ ಸೀಮಿತವಾಗಿಲ್ಲ, ದಸರಾ ಈಡೀ ವಿಶ್ವಕ್ಕೆ ಶ್ರೇಷ್ಠವಾಗಿದೆ.

ಮುಖ್ಯಂಮತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದಸರಾ ಮಹೋತ್ಸವದ ಬಗ್ಗೆ ಅಪಾರ ಕಾಳಜಿ ವಹಿಸಿ, ದಸರಾ ಯಶಸ್ವಿಯಾಗಲು ಶ್ರಮಿಸುತ್ತಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ರಾಜ್ಯದಲ್ಲಿ ಒಟ್ಟು 25 ಸಾವಿರ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳಿವೆ. ಇವುಗಳಲ್ಲಿ 500  ರಿಂದ 600 ಪಾರಂಪರಿಕ ಕಟ್ಟಡಗಳನ್ನು ಸರ್ಕಾರ ಗುರುತಿಸಿದೆ. ಇನ್ನೂ 500 ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ  ಸಂರಕ್ಷಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ.

ಎಲ್ಲಾ ಪಾರಂಪರಿಕ ಕಟ್ಟಡಗಳಾಗಲಿ, ಸ್ಮಾರಕಗಳನ್ನಾಗಲಿ ಸರ್ಕಾರ ಒಂದೆ ಮಾಡಲು ಆಗುವುದಿಲ್ಲ, ಜನಸಾಮಾನ್ಯರ ಅಭಿಮಾನ ಹಾಗೂ ಸಹಕಾರ ಬೇಕು ಎಂದು ಮನವಿ ಮಾಡಿದರು.

ಇಂತಹ ಕಟ್ಟಡಗಳನ್ನು ರಕ್ಷಿಸಲು ಜನರನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ನಮ್ಮ ಸ್ಮಾರಕಗಳ ದತ್ತು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದು ಯಶಸ್ವಿಯಾಗಿ ಸಾಗುತ್ತಿದೆ ಎಂದು ‌ತಿಳಿಸಿದರು.

ಇದೇ ವೇಳೆ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜು,ಮಹಾಪೌರರಾದ ಶಿವಕುಮಾರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ ಸುನೀಲ್ ಬೋಸ್ ದಂಪತಿಗಳಿಗೆ ಎಚ್. ಕೆ.ಪಾಟೀಲ್ ಬಾಗಿನ ನೀಡಿದ್ದು ವಿಶೇಷವಾಗಿತ್ತು

ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ್ ಮತ್ತಿತರರು ಹಾಜರಿದ್ದರು.