ಮೈಸೂರ: ಇತ್ತೀಚಿನ ಕಾರಾಗೃಹಗಳು ಅಪರಾಧಿಗಳಿಗೆ ದಂಡನೆ ಶಿಕ್ಷೆ, ಬಂಧನಗಳನ್ನು ನೀಡುತ್ತಿಲ್ಲ, ಬದಲಾಗಿ ಮನಃಪರಿವರ್ತನೆಗೆ ಅವಕಾಶ ಮಾಡಿಕೊಟ್ಟು ಸಮಾಜದಲ್ಲಿ ಶಾಂತಿ ಕಾಪಾಡುವಂತಹ ಕೆಲಸಗಳನ್ನು ಮಾಡುತ್ತಿವೆ ಎಂದು ಮೈಸೂರು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀಕ್ಷಕ ಬಿ.ಎಸ್ ರಮೇಶ್ ತಿಳಿಸಿದರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ಯೋಗದಸರ ಉಪ ಸಮಿತಿ ಕಾರಾಗೃಹ ವಾಸಿಗಳಿಗೆ ಆಯೋಜಿಸಿದ್ದ ವಿಶಿಷ್ಟ ಯೋಗಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ತನ್ನಿಂದ ತಾನೇ ಬರುವ ವಸ್ತುವಲ್ಲ ಅದಕ್ಕೆ ನಿರ್ವಹಣೆಯ ಅವಶ್ಯಕತೆ ಇದೆ. ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗ ಅತಿ ಅವಶ್ಯಕ.
ನಾಡ ಹಬ್ಬ ಮೈಸೂರು ದಸರಾ ಸವಿ ನೆನಪು ಕಟ್ಟಿಕೊಳ್ಳಲು ಇಂದು ನಮ್ಮ ಕಾರಾಗೃಹದಲ್ಲಿ ವಿಶಿಷ್ಟ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಂದು ವಿನೂತನ ಪ್ರಯತ್ನ ಎಂದು ಹೇಳಿದರು.
ಕಾರಾಗೃಹದಲ್ಲಿ ವಾಸಿಸುವ ನೀವುಗಳು ಅಲ್ಪ ಕಾಲಕ್ಕೆ ಮಾತ್ರ ಇಲ್ಲಿ ವಾಸಿಸುತ್ತೀರಾ. ಹಾಗಾಗಿ ಯಾವುದೊ ಕ್ಷಣದಲ್ಲಿ ಮಾಡಿದ ತಪ್ಪಿಗೆ ಸೆರೆಮನೆಯ ವಾಸವನ್ನು ಅನುಭವಿಸುತ್ತಿದ್ದೀರಿ. ಇಲ್ಲಿಂದ ಹೊರಡುವ ಮುನ್ನ ಮನಃಪರಿವರ್ತನೆ ಮಾಡಿಕೊಂಡು ಪ್ರತಿಯೊಬ್ಬರು ಸಮಾಜಕ್ಕೆ ಒಳ್ಳೆಯದನ್ನು ಬಯಸುವಂತಹ ಮನಸ್ಸನ್ನು ಇಟ್ಟು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಯೋಗ ದಸರ ಉಪ ಸಮಿತಿಯ ಅಧ್ಯಕ್ಷ ದೇವರಾಜ ಅವರು ಮಾತನಾಡಿ ನಿಮ್ಮ ಜೀವನದ ಯಾವುದೋ ಒಂದು ಕಹಿ ಘಟನೆಯಿಂದ ನೀವೆಲ್ಲರೂ ಸೆರೆಮನೆ ವಾಸ ಅನುಭವಿಸಬೇಕಾಗಿದೆ ನೀವು ಇಲ್ಲಿಂದ ಹೊರಡುವಾಗ ಉತ್ತಮ ನಾಗರಿಕರಾಗಿ ಹೊರಡಬೇಕು ಎಂದು ತಿಳಿಹೇಳಿದರು.
ಯೋಗಭ್ಯಾಸದ ಕುರಿತು ಅಭಿಪ್ರಾಯ ಹಂಚಿಕೊಂಡ ಕಾರಾಗೃಹದ ವಾಸಿಗಳು ಯೋಗದಿಂದ ನಮ್ಮ ಮನಸ್ಸು ದೇಹ ಸಮ ಸ್ಥಿತಿಯಲ್ಲಿರುತ್ತದೆ. ಧ್ಯಾನದ ಮೂಲಕ ನಮ್ಮ ಮಾನಸಿಕ ಚಿಂತೆಯನ್ನು ದೂರ ಮಾಡಬಹುದು ಎಂದು ತಿಳಿಸಿದರು.
ಕಳೆದ ಒಂದು ತಿಂಗಳಿಂದ ಕಾರಾಗೃಹದಲ್ಲಿ ಯೋಗ ತರಬೇತಿಯನ್ನು ಎಸ್ ಪಿ ವೈ ಎಸ್ ಎಸ್ ಸಂಸ್ಥೆಯಿಂದ ನೀಡಲಾಗಿತ್ತು.
ಸುಮಾರು 300 ಸೆರೆಮನೆ ವಾಸಿಗರು ಎರಡು ಗಂಟೆಗಳ ಕಾಲ ಯೋಗ ಅಭ್ಯಾಸ ಮಾಡಿದರು. ಚಾಮರಾಜನಗರ ಜಿಲ್ಲಾ ಆಡಳಿತ, ಆಯುಷ್ ಸಂಸ್ಥೆಯ ಸದಸ್ಯರು, ದಸರಾ ಯೋಗ ಉಪಸಮಿತಿಯ ಸದಸ್ಯರು ಕೂಡಾ ಯೋಗ ಮಾಡಿ ಸಿಹಿ ಹಂಚಿ ಯೋಗ ದಸರಾವನ್ನು ವಿಶಿಷ್ಟವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಕಾರಾಗೃಹದ ಕಾರ್ಯನಿರ್ವಾಹಕ ದಾಮೋದರ್ ,ಯೋಗ ದಸರಾ ಉಪ ಸಮಿತಿಯ ಉಪಾಧ್ಯಕ್ಷ ಮಹೇಶ್, ಭೂ ದಾಖಲೆಗಳ ಉಪ ನಿರ್ದೇಶಕಿ ಕೆ ರಮ್ಯಾ, ಯೋಗ ದಸರಾ ಉಪ ಸಮಿತಿಯ ಕಾರ್ಯಧ್ಯಕ್ಷೆ ಡಿ.ಎಮ್ ರಾಣಿ, ಕಾರ್ಯದರ್ಶಿ ಡಾ.ಪುಷ್ಪಾ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರು, ಯೋಗ ಶಿಕ್ಷಣ ಮತ್ತು ಸಂಶೋಧನೆಯ ಸದಸ್ಯರು, ಯೋಗ ದಸರಾ ಉಪ ಸಮಿತಿಯ ಸದಸ್ಯರು ಹಾಜರಿದ್ದರು.

