ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಅರಿವು ಅಗತ್ಯ: ಡಾ.ಜಿ.ರೂಪ

ಮೈಸೂರು: ಪಾರಂಪರಿಕ ಕಟ್ಟಡಗಳ ಬಗ್ಗೆ ಅರಿವು ಮೂಡಿಸಿ ಸಂರಕ್ಷಿಸಿ ಉಳಿಸಲು ಇಂತಹ ಪಾರಂಪರಿಕ ನಡಿಗೆಗಳು ಮುಖ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಾ.ಜಿ.ರೂಪ ಹೇಳಿದರು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳು, ಜನಸಾಮನ್ಯರು ಹಾಗೂ ಪ್ರವಾಸಿಗರಿಗೆ ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಬಗ್ಗೆ ತಿಳಿಸಿಲು ಶನಿವಾರ ಪುರಭವನದಲ್ಲಿ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ಯೋಗ ನಗರಿ, ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಹಾಗೂ ಪರಂಪರೆ ನಗರಿ ಎಂದು. ಖ್ತಾತವಾಗಿದೆ,ಇಂತಹ ಪರಂಪರೆಯುಳ್ಳ ನಗರಿಯ ಇತಿಹಾಸವನ್ನು ಪಾರಂಪರಿಕ ನಡಿಗೆಯ ಮೂಲಕ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರಿನಲ್ಲಿ ಅನೇಕ ಪಾರಂಪರಿಕ ಕಟ್ಟಡಗಳಿವೆ. ಮೈಸೂರಿನಲ್ಲಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.

ಡಾ.ಶಳ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ಈ ಪುರಭವನವನ್ನು ದಿವಾನ್ ರಂಗಚಾರ್ಲು ಅವರ ಸೇವೆಯ ಸವಿನೆನಪಿಗಾಗಿ 10ನೇ ಚಾಮರಾಜ ಒಡೆಯರ್ ಅವರು 1884ರ ಏ.01 ರಂದು ಕಟ್ಟಿಸಿದ್ದು. ಈ ಭವನ ವಿಶೇಷತೆ ಎಂದರೆ ಸಿಮೆಂಟ್ ಬಳಸದೆ ನಿರ್ಮಿಸಿರುವ ಕಟ್ಟಡವಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯವಾಗಿ ಎಲ್ಲರೂ ಸಿಮೆಂಟ್ ಕಟ್ಟಡಗಳು ಹೆಚ್ಚು ಸಧೃಡವಾಗಿರುತ್ತದೆ ಎಂದು ನಂಬಿರುತ್ತಾರೆ. ಆದರೆ ಸಿಮೆಂಟ್ ಕಟ್ಟಡಗಳ ಆಯಸ್ಸು ಕೇವಲ 60 ರಿಂದ 70 ವರ್ಷಗಳು ಮಾತ್ರ. ಹೀಗಾಗಿ ಇಂತಹ ಕಟ್ಟಡಗಳನ್ನು ಮಾರ್ಟರ್ ಅನ್ನು ಬಳಸಿ ಕಟ್ಟಿದ್ದರಿಂದ ಇಂತಹ ಅನೇಕ ಕಟ್ಟಡಗಳು ಇಂದಿಗೂ ಕಾಣಸಿಗುತ್ತಿದೆ ಎಂದರು.

ಭಾರತ ಸಂವಿಧಾನದಲ್ಲೇ ಪಾರಂಪರಿಕ ಕಟ್ಟಡಗಳ ಸಂರಕ್ಷಿಸಬೇಕು ಎಂದು ತಿಳಿಸಿದ್ದಾರೆ. ಸರ್ಕಾರ ಒಂದೇ ಸಂರಕ್ಷಿಸಲು ಆಗುವುದಿಲ್ಲ. ಅದಕ್ಕೆ ಎಲ್ಲರ ಸಹಕಾರ ಅವಶ್ಯ. ಹೀಗಾಗಿ ಇಂತಹ ಕಟ್ಟಡಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಪಾರಂಪರಿಕ ನಡಿಗೆಯಲ್ಲಿ ಮಹಾಜನ ಫಸ್ಟ್ ಗ್ರೇಡ್ ಕಾಲೇಜು, ಟೆರಿಷಿಯನ್ ಕಾಲೇಜ್,ಆಡಳಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ 180ಕ್ಕೂ ಹೆಚ್ಚು ಮಂದಿ ಪಾಲ್ಗೊಮನಡಿದ್ದರು.

ನಿವೃತ್ತ ಪ್ರೋಫೆಸರ್ ಡಾ.ಎನ್.ಎಸ್.ರಂಗರಾಜು ಹಾಗೂ ಇತಿಹಾಸಕಾರರಾದ ಡಾ.ಶಳ್ವ ಪಿಳ್ಳೆ ಅಯ್ಯಂಗಾರ್ ಅವರು ಕಟ್ಟಡಗಳ ಇತಿಹಾಸಗಳ ಬಗ್ಗೆ ವಿವರಿಸಿದರು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ. ದೇವರಾಜ, ಉಪ ನಿರ್ದೇಶಕರಾದ ಮಂಜುಳ ಮತ್ತಿತರರು ಹಾಜರಿದ್ದರು.