ವಿದ್ಯುತ್‌ ಉತ್ಪಾದನೆ ಸಾಧ್ಯವಿದ್ದರೂ ಖಾಸಗಿ ಕಂಪನಿಗಳಿಂದ ಖರೀದಿಸಿ ಪರ್ಸಂಟೇಜ್‌ ಕಲೆಕ್ಷನ್‌ ಗೆ ಹುನ್ನಾರ:ಎಚ್ ಡಿ ಕೆ

ಬೆಂಗಳೂರು: ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಹೇರಳ ಅವಕಾಶವಿದ್ದರೂ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಲು ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸಲಾಗಿದೆ ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಪಂಚರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಉದ್ದೇಶದಿಂದ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡಿ ಕಮೀಷನ್ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ಅವರು ದೂರಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಮಳೆಯ ಅಭಾವದಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ನಿಜ. ಆದರೆ, ಇತರೆ ಮೂಲಗಳಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಅಧಿಕಾರಕ್ಕೆ ಬಂದಾಗಲೇ ಸರಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಅಗತ್ಯವಾದಷ್ಟು ಕಲ್ಲಿದ್ದಲನ್ನು ದಾಸ್ತಾನು ಮಾಡಿಕೊಳ್ಳಬಹುದಿತ್ತು ಎಂದು ಹೇಳಿದರು.

ಈ ಸರಕಾರಕ್ಕೆ ಹಣ ಮಾಡುವುದು ಒಂದೇ ಉದ್ದೇಶ, ಹೈಕಮಾಂಡ್ ಮುಂದೆ ವಸೂಲಿ ಮಾಡುತ್ತೇವೆ ಎಂದು ನುಡಿದಿದ್ದರು. ಅದರಂತೆ ಈಗ ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ 16867.63 ಮೆಗಾವ್ಯಾಟ್ ವಿದ್ಯುತ್ ಅನ್ನು ಇವತ್ತೂ ಉತ್ಪಾದನೆ ಮಾಡಬಹುದು. ಜಲಾಶಯಗಳಲ್ಲಿ ನಿರೀಕ್ಷಿತ ನೀರು ಸಂಗ್ರಹ ಇಲ್ಲದಿರುವುದರಿಂದ ಮೊದಲಿಗಿಂತ ಅರ್ಧದಷ್ಟು ಜಲ ವಿದ್ಯುತ್ತನ್ನೇ ಮಾಡಲಿ. ಆದರೆ, ಇವರು ಉತ್ಪಾದನೆ ಮಾಡುತ್ತಿಲ್ಲ, ಮಾಡುವುದೂ ಇಲ್ಲ ಎಂದು ಟೀಕಿಸಿದರು.

ಗೃಹಜ್ಯೋತಿ ಕೊಡುತ್ತಿದ್ದೇವೆ ಎಂದರು ಕೊನೆಪಕ್ಷ ಆಗಲಾದರೂ ಅವರು ಉತ್ಪಾದನೆಯತ್ತ ಗಮನ ಕೊಡಬೇಕಿತ್ತು,ಆದರೆ ಕಮೀಷನ್‌ ದುರಾಸೆಯಿಂದ ಅದನ್ನೂ ಮಾಡಲಿಲ್ಲ ಎಂದು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆಗೆ ಸಂಬಂಧಿಸಿದ ಸಭೆ ನಡೆಸಿದರು. ರಾಜ್ಯದಲ್ಲಿ 15000 ಮೆಗಾವ್ಯಾಟ್ ಕೊರತೆ ಇದೆ, ಖರೀದಿ ಮಾಡ್ತೀವಿ ಎಂದು ಹೇಳಿದ್ದಾರೆ. ಐದು ತಿಂಗಳಿಂದ ಸುಮ್ಮನೆ ಇದ್ದವರು ಈಗ ಹಿಂದಿನ ಸರಕಾರದ ಪಾಪದ ಫಲ ಎಂದು ಹೇಳುತ್ತಿದ್ದಾರೆ. ಅವರದ್ದೇನೋ ಪಾಪದ ಫಲ, ನೀವು ಪುಣ್ಯ ಮಾಡಿದ್ದೀರಲ್ಲ, ನಿಮ್ಮ ಪುಣ್ಯದ ಫಲವನ್ನು ಜನತೆಗೆ ಕೊಡಬೇಕಲ್ಲವೆ ಎಂದು ಟಾಂಗ್ ನೀಡಿದರು.

ಒಂದೆಡೆ ಬರ, ಇನ್ನೊಂದು ಕಡೆ ವಿದ್ಯುತ್ ಕ್ಷಾಮದಿಂದ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಕೊಟ್ಟು ಕಾಪಾಡಿ ಎಂದು ಜನ ಕೇಳುತ್ತಿದ್ದರೆ ಬ್ಲೂ ಎನರ್ಜಿ ಉತ್ಪಾದನೆ ಮಾಡಲು ಒಂದು ಟೀಂ ಕರೆಸಿಕೊಂಡಿದ್ದಾರೆ ಇಂಧನ ಸಚಿವರು. ಸಮುದ್ರದಿಂದ ವಿದ್ಯುತ್ ಉತ್ಪಾದನೆ ಮಾಡಿ, ಬೇಡ ಎಂದವರು ಯಾರು? ಸದ್ಯಕ್ಕೆ ಜನರ ಕಷ್ಟ ಬಗೆಹರಿಸುವ ಕಡೆ ಗಮನ ಕೊಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಇಡೀ ರಾಜ್ಯವೇ ಕತ್ತಲೆಯಲ್ಲಿ ಇದ್ದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತಮ್ಮ ಸಚಿವರು, ಅಧಿಕಾರಿಗಳ ಪಟಾಲಂ ಕಟ್ಟಿಕೊಂಡು ಎಳೆಂಟು ಗಂಟೆ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದಾರೆ. ಅಲ್ಲಿ ಇವರೆಲ್ಲ ಮಜಾ ಮಾಡಿಕೊಂಡು ಕೂತಿದ್ದರು. ಇವರು ಯಾವ ದೇಶಕ್ಕೆ ಬೆಂಬಲ ನೀಡಲು ಹೋಗಿದ್ದರು, ಆಸ್ಟ್ರೇಲಿಯಾಕ್ಕಾ, ಅಥವಾ ಪಾಕಿಸ್ತಾನಕ್ಕಾ? ಜನರಿಗೆ ಹೇಳಬೇಕಲ್ಲವೆ

ಭಾರತದ ತಂಡ ಆಡುತ್ತಿದ್ದರೆ, ನಮ್ಮ ತಂಡಕ್ಕೆ ಬೆಂಬಲ ಕೊಡಲು ಹೋಗಿದ್ದಾರೆ ಎಂದು ಭಾವಿಸಬಹುದಿತ್ತು. ಇಂತಹ ಬರದ ಕಾಲದಲ್ಲಿಯೂ ಇವರಿಗೆ ಎಂಜಾಯ್ ಮಾಡುವ ಮನಃಸ್ಥಿತಿ ಇದೆ. ಅದಕ್ಕೆ ಏನೆಂದು ಹೇಳುವುದು ಎಂದು ಕುಮಾರಸ್ವಾಮಿ ಗರಂ ಆಗಿ ನುಡಿದರು.

ಇಂತಹ ಕಷ್ಟ ಕಾಲದಲ್ಲಿಯೂ ಜನರು ಸರಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ತೆರಿಗೆ ಸಂಗ್ರಹ ಕಡಿಮೆ ಆಗಿಲ್ಲ. ಸರಕಾರದಲ್ಲಿ ಹಣದ ಕೊರತೆ ಆಗಿಲ್ಲ. ಆರು ತಿಂಗಳಿನಿಂದ 79,000 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಆದರೆ ಗ್ಯಾರಂಟಿ ಎನ್ನುತ್ತಾ ಜನರ ಮೂತಿಗೆ ತುಪ್ಪ ಸವರುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಾನು ಮಾಹಿತಿ ಇಲ್ಲದೇ ಯಾವ ವಿಚಾರವನ್ನೂ ಚರ್ಚೆ ಮಾಡುವುದಿಲ್ಲ. ಮಾತೆತ್ತಿದರೆ ಬಿಚ್ಚಿಡ್ತೀನಿ ಅಂತಾರಲ್ಲ ಉಪ ಮುಖ್ಯ ಮಂತ್ರಿಗಳು
ಅದೇನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ನನ್ನದೇನೂ ತಕರಾರಿಲ್ಲ ಎಂದು ತಿರುಗೇಟು ನೀಡಿದರು.

ಅವರು ಬಂಧೀಖಾನೆ ಸಚಿವರಾಗಿ ಕರಿಯರ್‌ ಆರಂಭ ಮಾಡಿದ್ದರು. ಎಷ್ಟಾದರೂ ಅವರು ಅಲ್ಲಿಂದಲೇ ಬಂದವರಲ್ಲವೇ ಬೇಗನೆ ಬಿಚ್ವಿಡಲಿ ಅದಕ್ಕೂ ಮೊದಲೇ ಅವರಿಗೆ ಬೇರೆ ಏನಾದರೂ ಆದರೆ ಕಷ್ಟ ಎಂದು ಎಚ್ ಡಿ‌ಕೆ ಡಿ.ಕೆ.ಶಿವಕುಮಾರ್ ಗೆ ಟಾಂಗ್‌ ನೀಡಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಹಿರಿಯ ಮುಖಂಡ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.