ಜನಮನ ಸೂರೆಗೊಂಡ ಪಂಜಿನ‌ಕವಾಯತು: ರೋಮಾಂಚನಗೊಳಿಸಿದ ಬೈಕ್ ಸಾಹಸ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಬನ್ನಿ ಮಂಟಪದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಟಾರ್ಚ್ ಲೈಟ್ ಅಥವಾ ಪಂಜಿನ ಕವಾಯತು ಕಿಕ್ಕರಿದು ತುಂಬಿದ್ದ ಜನರ ಮೈ ರೋಮಾಂಚನಗಳಿಸಿತು.

ಭಾರತೀಯ ಸೇನೆಯ ಶ್ವೇತಾಶ್ವ ತಂಡ ನೀಡಿದ ಬೈಕ್ ಸಾಹಸ ಪ್ರದರ್ಶನವನ್ನು ಪ್ರೇಕ್ಷಕರು ರೋಮಾಂಚನದಿಂದ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಶ್ವೇತಾಶ್ವತಂಡ ಮೊದಲಿಗೆ ಸೀಜರ್ಸ್ ಕಟಿಂಗ್ ಮೂಲಕ ಸಾಹಸ ಪ್ರದರ್ಶನವನ್ನು ಆರಂಭಿಸಿತು ನಂತರ ಒಂದೊಂದಾಗಿ ಶ್ವೇತಾಶ್ವತಂಡ ತೋರಿದ ಬೈಕ್ ಪ್ರದರ್ಶನ ಜನರಲ್ಲಿ ಮೈನವಿರೇಳುವಂತೆ ಮಾಡಿತು.

ಇದರೊಂದಿಗೆ ಟ್ಯೂಬ್ ಲೈಟ್ ಬ್ರೇಕಿಂಗ್, ವಾಲ್ ಬ್ರೇಕಿಂಗ್, ಏರೋಪ್ಲೇನ್,
ಮೀನಿನ ಮಾದರಿ, ಹಿಮ್ಮುಖವಾಗಿ ಕುಳಿತು ಚಲಿಸುವುದು, ಎರಡು ಬೈಕ್ ಗಳ ನಡುವೆಯೇ ನಮ್ಮ ವೀರ ಯೋಧರು ಜಿಮ್ ಮಾಡುವ ದೃಶ್ಯ ಎಲ್ಲರ ಮನ ಸೋರೆಗೊಳಿಸಿತು

ಕೊನೆಯಲ್ಲಿ ಶ್ವೇತಾಶ್ವತಂಡ ಪಿರಮಿಡ್ ಮೂಲಕ ಶುಭ ಕೋರಿದ್ದು ಅತ್ಯಾಕರ್ಷಕವಾಗಿತ್ತು.

ನಂತರ ನಡೆದ ಬೆಳಕಿನ ವಿನ್ಯಾಸ ಕಾರ್ಯಕ್ರಮವು ಜನರ ಮನರಂಜಿಸಿದ್ದಲ್ಲದೆ ಅಚ್ಚರಿ ಮೂಡಿಸಿತು

ಬಾನಂಗಳದಲ್ಲಿ ಮೂಡಿದ ಬೆಳಕಿನ ಚಿತ್ತಾರ ಒಂದು ರೀತಿಯ ವಿಸ್ಮಯ ಉಂಟು ಮಾಡಿತು.

ಬೆಳಕಿನ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ಅರಸರ ಲಾಂಛನ ಗಂಡ ಬೇರುಂಡ, ಕರ್ನಾಟಕ ಸ್ಟೇಟ್ ಪೊಲೀಸ್, ಮೈಸೂರು ಅರಮನೆ ಅಂಬಾರಿ ಹೊತ್ತ ಅಭಿಮನ್ಯು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದ ಕೊನೆಯಲ್ಲಿ ಸಿ ಯು ಟ್ವೆಂಟಿ ಟ್ವೆಂಟಿ ಫೋರ್ ಎಂಬುದರೊಂದಿಗೆ ಬೆಳಕಿನ ಆಟಕ್ಕೆ ಅಂತ್ಯ ಹಾಡಲಾಯಿತು.

ಇದಕ್ಕೆ ಎಲ್ಲರೂ ಅತ್ಯಂತ ಸಂತಸ ದಿಂದ ಶಿಳ್ಳೆ ಚಪ್ಪಾಳೆ ಮೂಲಕ ಹರ್ಷ‌ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕನ್ನಡ ಚಲನಚಿತ್ರ ಗೀತೆಗಳನ್ನು ಆಧರಿಸಿದ ನೃತ್ಯರೂಪಕ ಪ್ರೇಕ್ಷಕರಲ್ಲಿ ಒಂದು ರೀತಿ ನಾಡ ಹಬ್ಬದ ಕಿಚ್ಚನ್ನು ಹೆಚ್ಚಿಸಿತು.

ಮೊದಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪೆರೇಡ್ ವಂದನೆಯನ್ನು ಸ್ವೀಕರಿಸಿದರು.

ಇದಾದ ನಂತರ ದಸರೆಯ ಕೊನೆಯ ದಿನದ ಅತ್ಯಂತ‌ ಪ್ರಮುಖ ಘಟ್ಟವಾದ ಪುಂಜಿನ ಕವಾಯತು ಆರಂಭಗೊಂಡಿತು.

ಇದರ ಮಧ್ಯೆ ನಡೆದ ಸೌಂಡ್ ಅಂಡ್ ಲೈಟ್ ಕಾರ್ಯಕ್ರಮ ಎಲ್ಲರನ್ನೂ ಮೋಡಿ ಮಾಡಿತು.

ಮೈಸೂರು ಮೌಂಟೆಡ್ ಪೊಲೀಸರು ನಡೆಸಿದ ಟೆಂಟ್ ಪಿಗ್ಗಿಂಗ್ ಕಾರ್ಯಕ್ರಮ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು.

ಇದಾದ ನಂತರ ನಡೆದ ಪಂಜಿನ ಕವಾಯತು ಕಾರ್ಯಕ್ರಮ ನೆರದಿದ್ದವರಲ್ಲಿ ಹರ್ಷವನ್ನುಂಟು ಮಾಡಿತು ಪಂಜಿನ ಬೆಳಕಿನಲ್ಲಿ ಮೂಡಿಬಂದ ವೆಲ್ಕಮ್, ಜೈ ಚಾಮುಂಡಿ, ಹ್ಯಾಪಿ ದಸರಾ ಎಲ್ಲರ ಗಮನ ಸೆಳೆಯಿತು.

ಕೊನೆಯಲ್ಲಿ ಜೈ ಹಿಂದ್ ತೋರಿಸುವ ಮೂಲಕ ಇಂದಿನ ವಿಜಯದಶಮಿ ಕಾರ್ಯಕ್ರಮವನ್ನು ಹರ್ಷದಿಂದ ಸಂಪನ್ನಗೊಳಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಶಾಸಕ ತನ್ನಿರ್ ಸೇಟ್,ಹಲವು ಸಚಿವರು,ಶಾಸಕರು,ಹಿರಿಯ ಅಧಿಕಾರಿಗಳು ಗಣ್ಯರು ಪಂಜಿನ ಕವಾಯತು ವೀಕ್ಷಿಸಿದರು.