ಮೈಸೂರು: ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಬೀರ್ಯದಿಂದ ನಿಧಾನವಾಗಿ ಸಾಗುತ್ತಿದ್ದರೆ ಅದನ್ನು ನೋಡಲು ಎರಡು ಕಣ್ಣು ಸಾಲದೆಂಬತ್ತಿತ್ತು.
ಇದು ಇಂದು ಸಂಪನ್ನಗೊಂಡ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ದೃಶ್ಯ.
ಅಭಿಮನ್ಯು ಆನೆ ಮೇಲೆ 750 ಕೆಜಿ ತೂಕದ ಚಿನ್ನದ ಅಂಬಾರಿಯೊಳಗೆ ವಿರಾಜಮಾನಳಾಗಿದ್ದ ಹಸಿರು ಸೀರೆಯುಟ್ಟ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ಧರಾಮಯ್ಯ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ಅರಮನೆ ಆವರಣದಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಬಳಿಗೆ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಆಗಮಿಸಿದಾಗ ಅಂಬಾರಿಯಲ್ಲಿ ಪ್ರತಿಷ್ಟಾಪಿಸಲಾದ ತಾಯಿ ಚಾಮುಂಡೇಶ್ವರಿಗೆ ಶುಭ ಮೀನ ಲಗ್ನದಲ್ಲಿ ಸಿದ್ಧರಾಮಯ್ಯ ಪುಷ್ಪಾರ್ಚನೆ ಮಾಡಿದರು.
ಸಿದ್ಧರಾಮಯ್ಯ ಅವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್, ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ,ಮೇಯರ್ ಶಿವಕುಮಾರ್ ಸಾಥ್ ನೀಡಿದರು.
ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದವು. ಸತತ 4ನೇ ಬಾರಿ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದು ಗಾಂಬೀರ್ಯದಿಂದ ನಡೆದುಕೊಂಡ.
ಜಂಬೂ ಸವಾರಿ ಮೆರವಣಿಗೆ ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್, ತಿಲಕ್ ನಗರ, ಬಂಬೂ ಬಜಾರ್ ಮೂಲಕ
ಸುಮಾರು 5 ಕಿಲೋ ಮೀಟರ್ ಕ್ರಮಿಸಿ
ಬನ್ನಿ ಮಂಟಪ ತಲುಪಿತು.
ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ಮೆರವಣಿಗೆಯನ್ನ ಕಣ್ತುಂಬಿಕೊಳ್ಳಲು ಸಾಂಸ್ಕೃತಿಕ ನಗರಿಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಒಂದು ಅಂದಾಜಿನ ಪ್ರಕಾರ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರು.
ಪ್ರತಿ ಬಾರಿಯಂತೆ ಈ ಬಾರಿಯೂ ಜಂಬೂಸವಾರಿಯಲ್ಲಿ 14 ಆನೆಗಳು ಭಾಗಿಯಾಗಿದ್ದವು. ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ವಿಜಯ, ವರಲಕ್ಷ್ಮೀ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮೀ, ಹಿರಣ್ಯ ಆನೆಗಳು ಸಾಥ್ ನೀಡಿದವು.
ಜಂಬೂಸವಾರಿ ಮೆರವಣಿಗೆಯಲ್ಲಿ 49 ಸ್ತಬ್ದಚಿತ್ರಗಳು ಪಾಲ್ಗೊಂಡಿದ್ದವು.ಈ ಬಾರಿ ಚಂದ್ರಯಾನ 3 ಇದ್ದುದು ವಿಶೇಷ.
ಜತೆಗೆ ಕಲಾತಂಡಗಳು ಮೆರಗು ಹೆಚ್ಚಿಸಿದವು. ವೀರಗಾಸೆ ಡೊಳ್ಳುಕುಣಿತ, ಕಂಸಾಳೆ ಸೇರಿದಂತೆ ವಿವಿಧ ಕಲಾತಂಡಗಳು ಎಲ್ಲರ ಮನಸೆಳೆದವು.ಅದರಲ್ಲೂ ಮರಗಾಲು ಕಟ್ಟಿಕೊಂಡಿದ್ದ ಚಾಮುಂಡಿ ವೇಶಧಾರಿಯಂತೂ ಎಲ್ಲರಲ್ಲೂ ರೋಮಾಂಚನ ಉಂಟು ಮಾಡಿದರು.
ದಸರಾ ಜಂಬೂಸವಾರಿ ಮೆರವಣಿಗೆ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಸೇರಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಪೊಲೀಸ್ ಭದ್ರತೆ ಮಾಡಲಾಗಿತ್ತು.

