ಮೈಸೂರು: ಐತಿಹಾಸಿಕ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಅರಮನೆ ಆವರಣದ ಬಳಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗಲಿ ಎಂದು ದೇವರಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು
ಹೇಳಿದರು.
ದಸರಾ ಒಂದು ನಾಡ ಹಬ್ಬವಾಗಿದೆ ಇದು ಜನರ ಹಬ್ಬ,ನಾಡ ಹಬ್ಬದಲ್ಲಿ ಜನತೆ ಪಾಲ್ಗೊಂಡು ಸುಖ ಸಂತೋಷ ನೆಮ್ಮದಿಯಿಂದ ಇರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಈ ಬಾರಿ ಬರ ಪರಿಸ್ಥಿತಿ ಇರುವ ಕಾರಣ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ ಹಾಗಾಗಿ ಸಾಂಪ್ರದಾಯಿಕವಾಗಿ ಆಚರಿಸುವಂತೆ ತಿಳಿಸಿದ್ದೆ ಎಂದು ಹೇಳಿದರು.
ಈ ಬಾರಿಯ ದಸರಾ ಮಹೋತ್ಸವದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಇದು ಸಂತಸ ತಂದಿದೆ.
ದಸರಾ ಉತ್ಸವವನ್ನು ವಿಜಯನಗರ ಅರಸರು ಆಚರಿಸುತ್ತಿದ್ದರು. ಆನಂತರ ಮೈಸೂರು ಅರಸರು ನವರಾತ್ರಿ ಸಂದರ್ಭದಲ್ಲಿ ದಸರಾ ಮಹೋತ್ಸವವನ್ನು ಆರಂಭಿಸಿದರು ಎಂದು ತಿಳಿಸಿದರು.
ಹಿಂದೆ ಅಂಬಾರಿಯಲ್ಲಿ ರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಆನಂತರ ಪ್ರಜಾ ರಾಜ್ಯ ಬಂದ ನಂತರ ಮೈಸೂರಿನಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ವಿಜಯದಶಮಿಯ ದಿನದಂದು ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿ ಪುಷ್ಪಾರ್ಚನೆ ಮಾಡಿ ನಂತರ ಮೆರವಣಿಗೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜಂಬೂಸವಾರಿ ವೀಕ್ಷಣೆಗೆ ರಾಜ್ಯ ಹಾಗೂ ದೇಶ ವಿದೇಶಗಳಿಂದ ಜನತೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸರ್ಕಾರ ರಾಜ್ಯದ ಜನತೆಗೆ ಯಾವ ರೀತಿಯಲ್ಲಿ ನೆರವು ನೀಡುತ್ತಿದೆ ಎಂಬುದನ್ನು ತಿಳಿಸುವ ಕಾರ್ಯವನ್ನು ಸಹ ಈ ದಸರಾದಲ್ಲಿ ಮಾಡಲಾಗುತ್ತಿದೆ.
ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಗಾಗಲೇ ಜಾರಿಗೆ ತಂದಿದ್ದೇವೆ ಇನ್ನೊಂದನ್ನೂ ಶೀಘ್ರದಲ್ಲೇ ತರುತ್ತೇವೆ ಎಂದು ಹೇಳಿದರು.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದಸರಾ ವೀಕ್ಷಣೆಗೆ ಆಗಮಿಸಿದ್ದಾರೆ. ಕಾರಣ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿರುವುದು ಎಂದು ಹೇಳಿದರು.
ದಸರಾ ಪ್ರಾಧಿಕಾರ ರಚಿಸಲಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಕುರಿತು ಇನ್ನು ಯೋಚಿಸಿಲ್ಲ ಎಂದು ಉತ್ತರಿಸಿದರು.
ಮುಖ್ಯ ಮಂತ್ರಿಗಳೊಂದಿಗೆ ಸಾಥ್ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ಮೈಸೂರು ದಸರಾ ಒಂದು ರಾಷ್ಟ್ರೀಯ ಹಬ್ಬವಾಗಿದೆ. ಈ ಸಂದರ್ಭದಲ್ಲಿ ನಾಡಿನ ಜನತೆ ನೆಮ್ಮದಿ ಶಾಂತಿ ಸುಖದಿಂದ ಇರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.
ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುಲಿದ ನಂತರ ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಡಿಸಿಎಂ ಡಿ.ಕೆ.ಶಿವಕುಮಾರ್,ಸಚಿವರಾದ ಹೆಚ್.ಸಿ.ಮಹದೇವಪ್ಪ,ಕೆ.ಎಚ್.ಮುನಿಯಪ್ಪ,ಮೈಸೂರು ಮೇಯರ್ ಶಿವಕುಮಾರ್ ಮತ್ತಿತರರೊಂದಿಗೆ ತೆರೆದ ವಾಹನದಲ್ಲಿ ಅರಮನೆ ಆವರಣದಲ್ಲಿ ಉದ್ದಕ್ಕೂ ತೆರಳಿ ಜನತೆಯತ್ತ ಕೈ ಬೀಸಿ ಅಭಿನಂದನೆ ಸಲ್ಲಿಸಿದರು.

