ಕುಮಾರಸ್ವಾಮಿ ಹೊಟ್ಟೆಕಿಚ್ಚು, ದ್ವೇಷದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ:ಸಿದ್ದರಾಮಯ್ಯ

ಮೈಸೂರು: ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ, ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರತ್ಯಾರೋಪ ಮಾಡಿದರು.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ನಮಗೆ ರಾಜಕೀಯದಲ್ಲಿ ದ್ವೇಷ ಗೊತ್ತಿಲ್ಲ, ಯಾರಾದರೂ ತಪ್ಪು ಮಾಡಿದ್ದರೆ ಅದನ್ನ ನಾವು ಒಪ್ಪುವುದಿಲ್ಲ. ಹಾಗಂತ ದ್ವೇಷದ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರು ನನ್ನ ಮಗನ ವಿಚಾರದಲ್ಲಿ ಸುಮ್ಮನೆ ಸುಳ್ಳು ಹಬ್ಬಿಸಿದ್ದರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ. ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ‌ ಎಂದು ಪ್ರಶ್ನಿಸಿದರು.

ಕೆಡಿಪಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾನೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿದರೆ ಹೇಗೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಹೇಳುವುದೆಲ್ಲಾ ಸುಳ್ಳು, ಅವರು ಈವರೆಗೆ ಯಾವುದಾದರೂ ಸತ್ಯ ಹೇಳಿದ್ದರೆ ತೋರಿಸಿ. ಸುಳ್ಳೆ ಕುಮಾರಸ್ವಾಮಿ ಮನೆದೇವರು.ಅವರು ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಟೀಕಿಸಿದರು.

ಮೋದಿಗೆ ನನ್ನ ಕಂಡರೆ ಭಯ. ಹೀಗಾಗಿಯೇ ಪಂಚ ರಾಜ್ಯ ಚುನಾವಣೆಯಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾರೆ. ಗ್ಯಾರಂಟಿಗಳ ಟೀಕಿಸಿದ ಮೋದಿ ಈಗ ಅದೇ ಗ್ಯಾರಂಟಿಗಳನ್ನೇ ಬೇರೆ ಕಡೆ ಘೋಷಣೆ ಮಾಡುತ್ತಿರುವ ಅರ್ಥ ಏನು ಎಂದು ಪ್ರಶ್ನಿಸಿದರು ಸಿಎಂ.

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಗಳಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆಯ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ, ಈಗಿನ್ನಾ ನವೆಂಬರ್‌, ಲೋಕಸಭೆ ಚುನಾವಣೆಗೆ ಮಾರ್ಚ್ ಕೊನೆಯಲ್ಲಿ ನೋಟಿಫಿಕೇಷನ್ ಆಗಲಿದೆ ಎಂದರು.

ರಾಮಮಂದಿರ ಹೊಸ ವಿಚಾರವಲ್ಲ. ರಾಮಮಂದಿರಕ್ಕೆ ನಮ್ಮ ವಿರೋಧ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿದೆ. ಅದರಂತೆ ದೇವಾಲಯ ನಿರ್ಮಾಣವಾಗುತ್ತಿದೆ ಎಂದು ಸಿಎಂ ‌ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಮ ಮಂದಿರದಿಂದ ಮತದಾರರು ಬದಲಾಗುತ್ತಾರೆ ಎನ್ನುವುದು ತಪ್ಪು. ದೇಶದ ಜನ ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ಬ್ರಿಟೀಷರು, ಮೊಘಲರ ದಾಳಿಯ ನಂತರವೂ ದೇಶ ಒಂದಾಗಿದೆ. ಬೇರೆ ಬೇರೆ ದೇಶ, ಭಾಷೆ ಇದ್ದರೂ ಒಗ್ಗಟ್ಟಿದೆ ಎಂದು ತಿಳಯ.

ಜೆಡಿಎಸ್ – ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಕರೆತರುತ್ತಿದ್ದೀರಿ ಎಂಬ ಮಾತಿದೆಯಲ್ಲ ಎಂದು ಕೇಳಿದ್ದಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಪಕ್ಷಕ್ಕೆ ಬಂದರೆ ಸ್ವಾಗತ,ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇನೆ ಎಂದು ‌ಸಿದ್ದರಾಮಯ್ಯ ತಿಳಿಸಿದರು.