ವರ್ಗಾವಣೆ ಅಂದರೆ ದಂಧೇನಾ? ಎಚ್ ಡಿ ಕೆಗೆ ಸಿಎಂ ಪುತ್ರ ಯತೀಂದ್ರ  ಪ್ರಶ್ನೆ

ಮೈಸೂರು: ವಿಡಿಯೋ ವೈರಲ್ ಬಗ್ಗೆ ಮೊದಲ ಬಾರಿಗೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಜೊತೆಗೆ ಸ್ಪಷ್ಟನೆ ಕೂಡಾ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಅವರು ಮಾತನಾಡಿದರು.

ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ,ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜೊತೆ  ಮಾತನಾಡುತ್ತೇನೆ ದುಡ್ಡಿನ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು,ಆದರೂ ಇದರ ಬಗ್ಗೆಯೇ ಬಹಳ ಚರ್ಚೆ ಆಗುತ್ತಿರುವುದರಿಂದ‌ ಈಗ  ಸ್ಪಷ್ಟೀಕರಣ ಕೊಡುತ್ತಿದ್ದೇನೆ ಎಂದು ಹೇಳಿದರು.

ನಾನು ಅವತ್ತು ಮಾತನಾಡಿರುವುದು ಸಿಎಸ್ಆರ್ ಫಂಡ್ ವಿಚಾರದ ಬಗ್ಗೆ, ಲಿಸ್ಟ್ ಎಂದ ಕೂಡಲೇ ಅದನ್ನು ವರ್ಗಾವಣೆ ಅಂತಲೇ ಯಾಕೆ ತಿಳಿದುಕೊಳ್ಳಬೇಕು ಎಂದು ಕುಮಾರಸ್ವಾಮಿಯವರ ಹೆಸರನ್ನು ಪ್ರಸ್ತಾಪಿಸದೆ ಪ್ರಶ್ನಿಸಿದರು.

ಇವರ ಅವಧಿಯಲ್ಲಿ ಲಿಸ್ಟ್ ಅಂದರೇ ವರ್ಗಾವಣೆ ಅಂದರೇ ಅದು ದಂಧೆಯಾಗಿತ್ತಾ, ಇವರ ಪತ್ನಿ, ಮಗ ಮತ್ತು ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತದಾ ಎಂದು ಕೇಳಿದರು.

ಹಾಗಾದರೇ ಇವರ ಅವಧಿಯಲ್ಲಿ ಮಾಡಿದ ವರ್ಗಾವಣೆಯಲ್ಲಾ ದಂಧೆಯೇ, ಹಣ ಪಡೆದೇ ವರ್ಗಾವಣೆ ಮಾಡಿದ್ದಾರಾ ಎಂದು ಕಾರವಾಗಿ ಯತೀಂದ್ರ ಪ್ರಶ್ನಿಸಿದರು.

ನನಗೆ ವರುಣ ಕ್ಷೇತ್ರದ ಜವಾಬ್ದಾರಿ ಇದೆ. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದರೂ ಅದರಲ್ಲಿ ತಪ್ಪೇನಿದೆ.

ಎಲ್ಲಾ ವರ್ಗಾವಣೆಯನ್ನೂ ಇವರು ಹಣದ ದೃಷ್ಟಿಯಲ್ಲಿ ನೋಡಿದರೆ ಇವರೂ ಕೂಡಾ ಅದೇ ಕೆಲಸ ಮಾಡುತ್ತಿದ್ದರು ಎಂದು ಅರ್ಥ ಅಲ್ವಾ.

ಆರೋಪಗಳನ್ನ ಮಾಡುವಾಗ ದಾಖಲೆ ಇಟ್ಟು ಆರೋಪ ಮಾಡಲಿ,ಅದು ಬಿಟ್ಟು ದಾಖಲೆ ಇಲ್ಲದೆ ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದು ಸವಾಲು ಹಾಕಿದರು.

ನಾನು ನನ್ನ ಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲಾ ವಿಚಾರವಾಗಿ ನನ್ನ ಹೆಸರನ್ನ ಡ್ರ್ಯಾಗ್ ಮಾಡಬೇಡಿ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ತಾಕೀತು ಮಾಡಿದರು.