ಜಾತಿ ಜನಗಣತಿ ವರದಿ ಮೂಲಪ್ರತಿಯೇ ನಾಪತ್ತೆ: ಸರ್ಕಾರಕ್ಕೆ ಪತ್ರ ಬರೆದ ಜಯಪ್ರಕಾಶ್ ಹೆಗ್ಡೆ

ಬೆಂಗಳೂರು: ಜಾತಿ ಜನಗಣತಿ ವರದಿ ಅನುಷ್ಠಾನ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು ಈಗ ಮತ್ತೊಂದು ವಿವಾದ ಸೇರ್ಪಡೆ ಯಾಗಿದೆ.

ಜಾತಿ ಜನಗಣತಿ ವರದಿ ಮೂಲಪ್ರತಿಯೇ ನಾಪತ್ತೆಯಾಗಿದ್ದು ಈ ಕುರಿತು ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪತ್ರ ಬರೆದಿದ್ದಾರೆ.

ಜಾತಿ ಗಣತಿಗೆ ಸಂಬಂಧಿಸಿದ ಮೂಲ ವರದಿಯೇ ಕಾಣೆಯಾಗಿದೆ. ಸೀಲ್ಡ್ ಬಾಕ್ಸ್​​ನಲ್ಲಿದ್ದ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯವಿಲ್ಲವೆಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಗಣತಿ ವರದಿ)ಯನ್ನು 2021ರ ಅಗಸ್ಟ್​ 26 ರಂದು ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಲ್ಲಿ ಇರಿಸಲಾಗಿತ್ತು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳು ಹಾಗೂ ಇತರ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು, ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರ್ ನಡೆಸಿ 2021ರ ಅಕ್ಟೋಬರ್​​ 5 ರಂದು ತೆರೆಯಲಾಗಿತ್ತು.

ಆದರೆ ಮುದ್ರಿತ ಮುಖ್ಯವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇರುವುದಿಲ್ಲ.
ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸಿನಲ್ಲಿ ಲಭ್ಯವಿಲ್ಲ.

ಹಾಗಾಗಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು.

ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಪತ್ರ ಬರೆದು ಕೋರಿದ್ದಾರೆ.