ಬಿಜೆಪಿಯದು ಐತಿಹಾಸಿಕ, ಅಭೂತಪೂರ್ವ ವಿಜಯ-ಪ್ರಧಾನಿ‌ ಶ್ಲಾಘನೆ

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ಮೂರರಲ್ಲಿ ಬಿಜೆಪಿಯ ಐತಿಹಾಸಿಕ ಹಾಗೂ ಅಭೂತಪೂರ್ವ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿ ಭ ಶ್ಲಾಘಿಸಿದ್ದಾರೆ.

ಬಿಜೆಪಿ ಸಂಭ್ರಮಾಚರಣೆ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,ಇಂದಿನ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ.  ಇಂದು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಭಾವನೆ ಗೆದ್ದಿದೆ ಎಂದು ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತ ಎಂಬ ಕರೆಗೆ ಜಯ ಸಿಕ್ಕಿದೆ,ಆತ್ಮನಿರ್ಭರ್ ಭಾರತದ ಸಂಕಲ್ಪ ಗೆದ್ದಿದೆ,ತುಳಿತಕ್ಕೊಳಗಾದವರು ಗೆದ್ದಿದ್ದಾರೆ, ಪ್ರಾಮಾಣಿಕತೆ ಮತ್ತು ಉತ್ತಮ ಆಡಳಿತ ಗೆದ್ದಿದೆ ಎಂದು ತಿಳಿಸಿದರು.

ದೇಶವನ್ನು ಜಾತಿ ಹೆಸರಿನಲ್ಲಿ ವಿಭಜಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ, ಮಹಿಳೆಯರು, ಯುವಕರು, ಬಡವರು ಮತ್ತು ರೈತರು ನಾಲ್ಕು ದೊಡ್ಡ ಜಾತಿಗಳಾಗಿದ್ದು, ಅವರ ಸಬಲೀಕರಣವು ದೇಶದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಫಲಿತಾಂಶದ ಧ್ವನಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಕ್ಕೆ ಸೀಮಿತವಾಗಿಲ್ಲ,ಪ್ರಪಂಚದಾದ್ಯಂತ ಕೇಳಿಬರುತ್ತದೆ.

ಭ್ರಷ್ಟಾಚಾರ, ತುಷ್ಟೀಕರಣ ಮತ್ತು ಕುಟುಂಬವಾದದ ವಿರುದ್ಧದ ಅಸಮಾಧಾನವನ್ನು ಇಂದಿನ ಜನಾದೇಶ ಸಾಬೀತುಪಡಿಸಿದೆ. ಈ ಮೂರು ಅನಿಷ್ಟಗಳನ್ನು ತೊಡೆದುಹಾಕಲು ಯಾರಾದರೂ ಪರಿಣಾಮಕಾರಿಯಾಗಿದ್ದರೆ ಅದು ಬಿಜೆಪಿ ಮಾತ್ರ ಎಂದು ದೇಶದ ಜನ ಭಾವಿಸುತ್ತಾರೆ ಎಂದು ತಿಳಿಸಿದರು.

ದೇಶವನ್ನು ದುರ್ಬಲಗೊಳಿಸುವ ರಾಷ್ಟ್ರವಿರೋಧಿ ಅಂಶಗಳನ್ನು ಮತ್ತು ಆಲೋಚನೆಗಳನ್ನು ಬಲಪಡಿಸುವ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಮೋದಿ ಸಲಹೆ ನೀಡಿದರು.