ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗೆ ಸರ್ಕಾರ ಉತ್ತರಿಸಲಿದೆ – ಸಿಎಂ ಸಿದ್ದರಾಮಯ್ಯ

ಬೆಳಗಾವಿ, ಡಿಸೆಂಬರ್ 4: ಬೆಳಗಾವಿಯಲ್ಲಿ ಇದೇ‌ ಸೋಮವಾರದಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ.

ಈ ಅಧಿವೇಶನದಲ್ಲಿ ಪ್ರತಿಪಕ್ಷದವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳತ್ತಲೂ ಗಮನಹರಿಸಲಾಗುವುದು ಎಂದು ಹೇಳಿದರು.

ಪಂಚರಾಜ್ಯ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ನಿರೀಕ್ಷಿತ ಯಶಸ್ಸು ಸಾಧ್ಯವಾಗದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಸಾಧಿಸಿದೆ ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಕೂಡಾ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು, ಕಾಂಗ್ರೆಸ್ ಸರ್ಕಾರ ಎಂದಿಗೂ ಚುನಾವಣೆಯಲ್ಲಿ ಗೆಲುವು ಸಾಧಿಸಲೆಂದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದಿಲ್ಲ.

ಬಡಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಪ್ರಾಮಾಣಿಕತೆಯಿಂದ ಇವುಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳೆಲ್ಲ ಬಡವರ ಕಾರ್ಯಕ್ರಮಗಳು ಎಂದು ತಿಳಿಸಿದರು.

ಈ ಬಾರಿ ವಿರೋಧಪಕ್ಷದವರು ಜಂಟಿಯಾಗಿ ಹೋರಾಟ ಕೈಗೊಳ್ಳಲಿದ್ದಾರಲ್ಲಾ ಎಂದು ಕೇಳಿದಕ್ಕೆ ಪ್ರತಿಕ್ರಯಿಸಿ, ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಬಿಜೆಪಿಯವರು ವಿಪಕ್ಷ ನಾಯಕರನ್ನು ಆಯ್ಕೆ ಮಾಡಿರಲಿಲ್ಲ. ವಿರೋಧಪಕ್ಷದವರಿಗೆ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಅವರು ಜಂಟಿಯಾಗಿ ಹೋರಾಟ ನಡೆಸಿದರೂ,ಒಂಟಿಯಾಗಿ ಹೋರಾಟ ನಡೆಸಿದರೂ ಅವರ ಎಲ್ಲ ಹೋರಾಟಗಳಿಗೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.