ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಲಿ:ಸಚಿವ ಹೆಚ್‌.ಸಿ.ಮಹದೇವಪ್ಪ ಆಗ್ರಹ

ಮೈಸೂರು: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗಲೆ ಬದ್ರತಾವೈಫಲ್ಯ ವಾಗಿದ್ದು, ಸಂಸದ ಪ್ರತಾಪ್ ಸಿಂಹ ಹೆಸರು ಕೇಳಿಬಂದಿರೋ ಹಿನ್ನೆಲೆಯಲ್ಲಿ ಅವರ‌ ವಿರುದ್ಧ ತನಿಖೆಯಾಗಬೇಕೆಂದು ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರ ಬಂದರೆ ಸಾಕು, ಒಂದಿಲ್ಲೊಂದು ರೀತಿಯ ಭದ್ರತಾ ವೈಫಲ್ಯಗಳು ಉಂಟಾಗಿರುವುದನ್ನು ಇತಿಹಾಸ ತಿಳಿಸುತ್ತದೆ.

2001 ರಲ್ಲಿ ಎಲ್. ಕೆ ಅಡ್ವಾಣಿ ಅವರು ಗೃಹ ಸಚಿವರಾಗಿದ್ದಾಗ ಸಂಸತ್ ಮೇಲೆ ದಾಳಿ ನಡೆದಿತ್ತು, ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಭದ್ರತಾ ವೈಫಲ್ಯದ ಪರಿಣಾಮ ಪುಲ್ವಾಮ ಗಡಿಯ ಒಳಗೆ 300 ಕೆಜಿಯಷ್ಟು RDX ಪ್ರವೇಶ ಪಡೆದು ಆದ ಸ್ಪೋಟದಿಂದ ನಮ್ಮ ಸೈನಿಕರ ಅಮೂಲ್ಯ ಜೀವವು ಹೋಗುವಂತಾಯಿತು.

ಅಚ್ಚರಿ ಎಂದರೆ ಇಲ್ಲಿಯವರೆಗೂ ಪುಲ್ವಾಮ ಗಡಿಯಲ್ಲಿ RDX ಹೇಗೆ ಬಂತು ಎಂಬುದರ ಬಗ್ಗೆ ಯಾವ ತನಿಖೆಯೂ ಆಗಲೇ ಇಲ್ಲ.

ಇದೀಗ ಮತ್ತೆ ಲೋಕಸಭೆಯೊಳಗೆ ಭದ್ರತಾ ವೈಫಲ್ಯದಿಂದಾಗಿ ಆತಂಕ ಸೃಷ್ಟಿ ಆಗಿದ್ದು ನಮ್ಮ ಮೈಸೂರಿನ ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿರುವುದು ಸ್ಪಷ್ಟವಾಗಿದೆ.

ಒಂದು ವೇಳೆ ಅಲ್ಲಿ ಏನಾದರೂ ದೊಡ್ಡ ಅನಾಹುತ ಘಟಿಸಿದ್ದರೆ ಅದಕ್ಕೆ ಯಾರು ಜವಾಬ್ದಾರಿಯಾಗುತ್ತಿದ್ದರು ಎಂದು ಮಹದೇವಪ್ಪ ಪ್ರಶ್ನಿಸಿದ್ದಾರೆ.

ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಇದರ ಹಿಂದಿನ ನೈಜ ಕಾರಣಗಳನ್ನು ಪತ್ತೆ ಹಚ್ಚಬೇಕೆಂದು ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ