ಹುಬ್ಬಳ್ಳಿ : ಹೆಣ್ಣುಮಕ್ಕಳ ಮೇಲಾಗುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯಗಳು ಎಲ್ಲಿಯೂ ನಡೆಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಿಎಂ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಮಗುಮ್ಮಾಗಿ ಹೇಳಿದರು.
ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲಾದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸತ್ಯಶೋಧನಾ ತಂಡ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಕಾನೂನು ರೀತಿಬ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಗೃಹಸಚಿವರು ಆಸ್ಪತ್ರೆಯಲ್ಲಿ ಸಂತ್ರಸ್ಥೆಯನ್ನು ಭೇಟಿ ಮಾಡಿ ಸಾಂತ್ವನ ನೀಡಿ ಪರಿಹಾರ ನೀಡಲು ಕ್ರಮಕೈಗೊಂಡಿದ್ದಾರೆ, ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನ್ಯಾಷನಲ್ ಕ್ರೈಂ ಬ್ಯೂರೋ ಪ್ರಕಾರ ಅವರ ಅವಧಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆದಿವೆ.
ಉತ್ತರಪ್ರದೇಶದ ಬಿಜೆಪಿಯ ಶಾಸಕರೊಬ್ಬರಿಗೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ 25 ವರ್ಷ ಜೈಲುಶಿಕ್ಷೆ ವಿಧಿಸಿದೆ. ಇದರ ಬಗ್ಗೆ ನಡ್ಡಾ ಅವರ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದರು.
ಸಂಸತ್ ಭವನದಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ವಿಪಕ್ಷಗಳು ರಾಜಕೀಯ ಮಾಡುತ್ತಿರುವುದಾಗಿ ಬಿಜೆಪಿಯವರು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಸಂಸತ್ತಿನಲ್ಲಿ ಭದ್ರತಾ ಲೋಪವಾಗಿರುವುದು ಸತ್ಯ, ನಿಜ ಹೇಳಿದರೆ
ರಾಜಕೀಯವಾಗುವುದಿಲ್ಲ ಎಂದು ಸಿಎಂ ಉತ್ತರಿಸಿದರು.
ಜಾತಿ ಗಣತಿ ವರದಿ ಹೊರಬರಲು ಪ್ರಬಲ ಜಾತಿಯವರು ಅಡ್ಡಿಪಡಿಸುತ್ತಿರುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜಾತಿ ಗಣತಿ ವರದಿ ಇನ್ನೂ ಬಂದಿಲ್ಲ,ಯಾರಿಗೂ ಆ ವರದಿಯಲ್ಲಿರುವ ಅಂಶಗಳೇನು ಎಂಬ ಮಾಹಿತಿ ಇಲ್ಲ, ಕೇವಲ ಊಹೆಗಳ ಮೇಲೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

