ಸುಳ್ಳು ಹೇಳಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ-ಅಶೋಕ ಆಗ್ರಹ

ಬೆಂಗಳೂರು: ಕರಸೇವಕ ಶ್ರೀಕಾಂತ್‌ ಪೂಜಾರಿ ಬಂಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿ ಸುಳ್ಳು ಹೇಳಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಖ್ಯಮಂತ್ರಿಯವರಿಗೆ ಒಂದೋ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೈ ತಪ್ಪಿ, ಕಾಣದ ಕೈಗಳು ದಿಕ್ಕು ತಪ್ಪಿಸುತ್ತಿವೆ ಎಂದು ಟೀಕಿಸಿದರು.

ಇಲ್ಲವೆಂದರೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಕೆಣಕಲು ಉದ್ದೇಶಪೂರ್ವಕವಾಗಿ ಈ ಪ್ರಕರಣಕ್ಕೆ ಮರುಜೀವ ನೀಡಿದ್ದು ಏಕೆ, ಇವೆರಡರಲ್ಲಿ ಯಾವುದು ಸತ್ಯವಾದರೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರ್ಥ.

ಆದ್ದರಿಂದ ಕೂಡಲೇ ತಮ್ಮ ತಪ್ಪನ್ನು ಒಪ್ಪಿಕೊಂಡು ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಜನರಲ್ಲಿ ಕ್ಷಮಾಪಣೆ ಕೋರಿ ರಾಜೀನಾಮೆ ನೀಡಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಒಬ್ಬ ಸಮರ್ಥ ಮುಖ್ಯಮಂತ್ರಿಗೆ ದಾರಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಶ್ರೀಕಾಂತ್ ಪೂಜಾರಿ ಅವರ ಮೇಲೆ ಇದ್ದ 16 ಪ್ರಕರಣಗಳಲ್ಲಿ 15 ಪ್ರಕರಣಗಳು ಈಗಾಗಲೇ ತಾರ್ಕಿಕ ಅಂತ್ಯ ಕಂಡಿವೆ, ಬಾಕಿ ಇರುವ ಒಂದು ಪ್ರಕರಣ ಸಹ 1992 ರಲ್ಲಿ ಅವರು ನಾಪತ್ತೆಯಾಗಿದ್ದರು ಎಂಬ ಕಾರಣಕ್ಕೆ ದಾಖಲಾಗಿತ್ತು. ಆದರೆ ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿ ಸುಳ್ಳು ಹೇಳಿದ್ದು, ಅವರನ್ನು ಆ ಪ್ರಭು ಶ್ರೀರಾಮ ಕ್ಷಮಿಸುವುದಿಲ್ಲ ಎಂದು ಅಶೋಕ್ ಹೇಳಿದರು.

ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಕರಸೇವಕರನ್ನು ಹುಡುಕಿ ಹಳೆಯ ಪ್ರಕರಣಗಳಲ್ಲಿ ಬಂಧಿಸಲಾಗುತ್ತಿದೆ ಎಂದು ಅಶೋಕ್ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಪಿ.ಸಿ.ಮೋಹನ್‌, ರವಿಕುಮಾರ್‌ ಸೇರಿದಂತೆ ನಾವೆಲ್ಲರೂ ಕರಸೇವಕರು,ತಾಕತ್ತಿದ್ದರೆ ಸರ್ಕಾರ ನಮ್ಮನ್ನು ಬಂಧಿಸಲಿ‌ ಅವರು ಸವಾಲು ಹಾಕಿದರು.