ಬೆಂಗಳೂರು: ಪ್ರತಿ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಸ್ಥಾಪನೆ ಸೇರಿದಂತೆ ಚಿತ್ರಕಲಾ ಪರಿಷತ್ತಿನ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ಸರ್ಕಾರ ಸಿದ್ದವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 21 ನೇ ಚಿತ್ರಸಂತೆಯನ್ನು ಕ್ಯಾನ್‍ವಾಸ್ ಮೇಲೆ ಸಹಿ ಹಾಕುವ ಮೂಲಕ ಉದ್ಘಾಟಿಸಿ ನಂತರ ಸಿದ್ದರಾಮಯ್ಯ ಮಾತನಾಡಿದರು.
ಈ ಬಾರಿಯ ಚಿತ್ರಸಂತೆಯನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದ ವಿಜ್ಞಾನಿಗಳಿಗೆ ಸಮರ್ಪಿಸಿರುವುದು ಸಂತಸದ ವಿಷಯ ಎಂದು ಹೇಳಿದರು.
ಈ ಮೊದಲು 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷವೂ ಚಿತ್ರಸಂತೆಯನ್ನು ಉದ್ಘಾಟನೆ ಮಾಡಿದ್ದೆ. ಇದು ನನಗೆ ಮುಖ್ಯಮಂತ್ರಿಯಾಗಿ 6ನೇ ಕಾರ್ಯಕ್ರಮ ಎಂದು ಸಿಎಂ ತಿಳಿಸಿದರು.
ಈ ಮೊದಲು ಮುಖ್ಯಮಂತ್ರಿಯಾಗಿದ್ದಾಗ ಚಿತ್ರಕಲಾ ಪರಿಷತ್‍ಗೆ 1 ಕೋಟಿ ರೂ ಅನುದಾನ ನೀಡಿದ್ದೆ, ಈ ಬಾರಿ 10 ಲಕ್ಷ ರೂ.ಗಳನ್ನು ಕೊಡುವುದಾಗಿ ಭರವಸೆ ನೀಡಿದ್ದೆ. ಅದನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸುವುದಾಗಿ ಭರವಸೆ ನೀಡಿದರು.
ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಒಂದೇ ರಸ್ತೆಯಲ್ಲಿ ಸಾವಿರಾರು ಕಲಾವಿದರು ಭಾಗವಹಿಸುವ ಈ ಕಾರ್ಯಕ್ರಮ ವಿಶ್ವದಲ್ಲಿ ಎಲ್ಲಿಯೂ ನಡೆಯುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗಳ ನಿವಾಸವಿರುವ ಕುಮಾರಕೃಪ ರಸ್ತೆಯಲ್ಲಿ ಒಂದು ದಿನ ಸಂಚಾರವನ್ನು ಸ್ಥಗಿತಗೊಳಿಸಿ ಚಿತ್ರಸಂತೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ. ಕುಮಾರಕೃಪ, ಗಾಂಧಿ ಭವನ, ಸೇವಾದಳ ರಸ್ತೆಗಳಷ್ಟೇ ಅಲ್ಲದೆ ಈ ಬಾರಿ ಶಿವಾನಂದ ವೃತ್ತವನ್ನು ಸಂಪರ್ಕಿಸುವ ಮೇಲ್ಸೇತುವೆಯ ಕೆಳಭಾಗದಲ್ಲೂ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಸಚಿವರಾದ ಎಚ್.ಕೆ.ಪಾಟೀಲ್, ಡಾ.ಎಂ.ಸಿ. ಸುಧಾಕರ್, ಶಾಸಕರಾದ ರಿಜ್ವಾನ್ ಅರ್ಷದ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಶಾಸಕ ಅಜಯ್ ಸಿಂಗ್, ಚಿತ್ರಕಲಾ ಪರಿಷತ್ ಉಪಾಧ್ಯಕ್ಷ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

