ಬೆಂಗಳೂರು: ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು,ಈ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ, ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಸಹ ಅಲ್ಲ ಎಂದು ಹೇಳಿದರು.
ನನ್ನ ಅಭಿಪ್ರಾಯ ಈಗಾಗಲೇ ಸ್ಪಷ್ಟವಾಗಿ ಸಾಕಷ್ಟು ಬಾರಿ ಹೇಳಿದ್ದೇನೆ. ಹೇಳಿಕೆಯನ್ನು ಬದಲಾಯಿಸುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.
ಲೋಕಸಭೆ ಚುನಾವಣೆ ವಿಚಾರವಾಗಿ ಗುರುವಾರ ಮಂಡ್ಯ ಜಿಲ್ಲೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ನಮ್ಮಹಿರಿಯ ನಾಯಕರು, ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.
ದೇವೇಗೌಡರು, ಕುಮಾರಸ್ವಾಮಿ ಹಾಗೂ ನಮ್ಮ ಮಂಡ್ಯ ನಾಯಕರು ಚರ್ಚಿಸುವರು ನಮ್ಮ ನಾಯಕರ ಜೊತೆಗೆ ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರ ಭಾವನೆಗಳನ್ನು ಕಲೆ ಹಾಕಿ ನಂತರ ಅಭ್ಯರ್ಥಿಗಳ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಹೆಚ್.ಡಿ ಕುಮಾರಸ್ವಾಮಿಯವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವೆಲ್ಲ ಊಹಾಪೋಹಗಳು ಅಷ್ಟೆ,ಸ್ವಲ್ಪ ದಿನದಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

